
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಸಾಲ ಮರುಪಾವತಿಗಾಗಿ ಮೈಕ್ರೋ ಫೈನಾನ್ಸ್ ಕಂಪನಿಯ ಏಜೆಂಟರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಶಿರೂರು ಗ್ರಾಮದಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಸರೋಜಾ ಕಿರಾಬಿ(52) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸರೋಜಾ ಸಾವಿಗೆ ಹೊಳೆಪ್ಪ ದಡ್ಡಿ ಎಂಬುವವರೇ ಕಾರಣವೆಂದು ಆರೋಪಿಸಿ ಅವರ ಮಗ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಯಮನಪುರದ ಹೊಳೆಪ್ಪ ದಡ್ಡಿ ಎಂಬುವವರು ಸರೋಜಾ ಹೆಸರಿನಲ್ಲಿ ಮೈಕ್ರೋಫೈನಾನ್ಸ್ನಿಂದ ₹2.3 ಲಕ್ಷ ಸಾಲ ಪಡೆದಿದ್ದರು. ದಾಖಲೆಗಳಿಗೆ ಸರೋಜಾ ಸಹಿ ಹಾಕಿದ್ದರು. ಫೈನಾನ್ಸ್ನಲ್ಲಿ ಸಬ್ಸಿಡಿಯೆಂದು ಹೇಳಿ ಹೊಳೆಪ್ಪ ದಡ್ಡಿ ₹2.30 ಲಕ್ಷ ಸಾಲ ಕೊಡಿಸಿದ್ದ. ಕೊಡಿಸಿದ ಅರ್ಧದಷ್ಟು ಸಾಲ ತನಗೆ ಕೊಟ್ಟರೆ ತಾನೇ ಸಾಲ ಕಟ್ಟುವುದಾಗಿ ಹೇಳಿದ್ದ. ಆದರೆ ಆತನನ್ನು ನಂಬಿ ಸಾಲ ಪಡೆದು ಅರ್ಧದಷ್ಟು ಹಣವನ್ನು ಸರೋಜಾ ಹೊಳೆಪ್ಪಗೆ ನೀಡಿದ್ದರು. ಅರ್ಧ ಸಾಲ ಕಟ್ಟಿದ ಬಳಿಕ ಫೈನಾನ್ಸ್ನಿಂದ ಪೂರ್ತಿ ಸಾಲ ಕಟ್ಟಲು ಸೂಚನೆ ನೀಡಿದ್ದಾರೆ. ಈ ವೇಳೆ ತಾನೂ ಹಣ ಕಟ್ಟುವುದಿಲ್ಲ, ಸಬ್ಸಿಡಿಯಾಗಿ ಸಾಲ ಪಡೆದಿದ್ದೇನೆಂದು ಸರೋಜ ಹೇಳಿದ್ದಾರೆ. ತಾವು ಸಬ್ಸಿಡಿ ಸಾಲ ಕೊಟ್ಟಿಲ್ಲ ಪೂರ್ತಿ ಹಣ ಕಟ್ಟಿ ಎಂದು ಫೈನಾನ್ಸ್ ಸಿಬ್ಬಂದಿ ನಿತ್ಯ ಕಿರುಕುಳ ನೀಡಿದ್ದಾರೆ. ಈ ವೇಳೆ ಅರ್ಧ ಸಾಲ ಪಡೆದ ಹೊಳೆಪ್ಪ ಕೂಡಾ ಸಾಲ ಕಟ್ಟುವುದಿಲ್ಲವೆಂದು ಕೈ ಎತ್ತಿದ್ದಾನೆ” ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಹೊಳೆಪ್ಪ ಎಂಬಾತ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದುಕೊಳ್ಳುವ ಮೂಲಕ ಅನೇಕ ಮಹಿಳೆಯರಿಗೆ ಮೋಸ ಮಾಡಿದ್ದಾರೆಂಬ ಆರೋಪಗಳಿವೆ. ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಹೊಳೆಪ್ಪನ ವಿರುದ್ಧ ಕಾಕತೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದೆ.
ಇದನ್ನೂ ಓದಿದ್ದೀರಾ? ಬೆಳಗಾವಿ | ಒಂದು ತಿಂಗಳ ಬಾಣಂತಿ, ಹಸುಗೂಸು ಸೇರಿ ಮನೆ ಮಂದಿಯನ್ನೆಲ್ಲ ಹೊರ ಹಾಕಿದ ಫೈನಾನ್ಸ್ ಕಂಪೆನಿ
“ಬೆಳಗಾವಿ ಜಿಲ್ಲೆಯ ಸುಮಾರು 40 ಮೈಕ್ರೋಫೈನಾನ್ಸ್ ಸಂಸ್ಥೆಗಳು ಸ್ವಸಹಾಯ ಗುಂಪುಗಳು ಮತ್ತು ಮೈಕ್ರೋಫೈನಾನ್ಸ್ ಕಂಪನಿಗಳ ಮೂಲಕ ಸುಮಾರು 15,000 ಜನರಿಗೆ ಮೋಸ ಮಾಡಿರುವುದು ಕಂಡುಬಂದಿದೆ. ಅಂದಾಜು ವಂಚನೆ ಸುಮಾರು ₹100 ಕೋಟಿ ಹಗರಣದ ತನಿಖೆಗಾಗಿ ಮೂವರು ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದ್ದು, ಕೆಲವು ಆರೋಪಿಗಳನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇತ್ತೀಚೆಗೆ ಹೇಳಿದ್ದಾರೆ.
