
ಬಳ್ಳಾರಿ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಸುನೀಲ್ ಎಂಬುವವರನ್ನು ದುಷ್ಕರ್ಮಿಗಳು ಶನಿವಾರ ಮುಂಜಾನೆ ಅಪಹರಿಸಿರುವ ಘಟನೆ ನಡೆದಿದೆ.
ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆ ಬಳಿ ಮುಂಜಾನೆ ಸುಮಾರು 6ರ ವೇಳೆ ಅಪಹರಣ ನಡೆದಿದ್ದು, ಸುನೀಲ್ ಮೊಬೈಲ್ನಿಂದಲೇ ಅವರ ತಮ್ಮ,, ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್ ಗುಪ್ತ ಅವರಿಗೆ ಕರೆ ಮಾಡಿರುವ ಅಪಹರಣಕಾರರು ₹6 ಕೋಟಿಯಷ್ಟು ಹಣ ಮತ್ತು ಚಿನ್ನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆಂದು ತಿಳಿದುಬಂದಿದೆ.
ಸದ್ಯ ಪೊಲೀಸರು ಅಪಹರಣಕಾರರ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದು, ನಗರದ ಹಲವೆಡೆ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಇದ್ದನ್ನೂ ಓದಿದ್ದೀರಾ? ಬೆಳಗಾವಿ | ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು; ಆರೋಪ
“ಬಳ್ಳಾರಿ ಹೊರವಲಯದ ಮೋಕಾ ಕಡೆಗೆ ಅಪಹರಣಕಾರರು ಹೋಗಿದ್ದಾರೆಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಈ ಮಾರ್ಗದ ಚೆಕ್ಪೋಸ್ಟ್ಗಳಲ್ಲಿ ಪರಿಶೀಲನೆ ತೀವ್ರಗೊಳಿಸಲಾಗಿದೆ. ಪ್ರಮುಖ ಪ್ರದೇಶಗಳಲ್ಲಿ ನಾಕಾಬಂಧಿ ಹಾಕಲಾಗಿದೆ. ಜಿಲ್ಲೆಯ ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ತನಿಖೆಯಲ್ಲಿ ತೊಡಿಗಿಸಲಾಗಿದೆ” ಎಂಬುದು ಪೊಲೀಸ್ ಮೂಲಗಳಿಂದ ಖಚಿತವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ ಜೆ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ತನಿಖಾ ತಂಡಕ್ಕೆ ಸಲಹೆ ಸೂಚನೆ ನೀಡಿದ್ದಾರೆ.