
ದೇವರ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ದೇಣಿಗೆ ರೂಪದಲ್ಲಿ ಬಂದ ಹಣವನ್ನು ದೇವಸ್ಥಾನದ ಕೆಲಸಕ್ಕೆ ಬಳಸದೆ ತಮ್ಮೂರಿನ ಶಾಲೆಗೆ ಕೊಠಡಿಗಳನ್ನು ನಿರ್ಮಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮಸ್ಥರು ಮಾದರಿಯಾಗಿದ್ದಾರೆ.
ಕುಷ್ಟಗಿ ಪಟ್ಟಣದ ಹತ್ತಿರವಿರುವ ಸಣ್ಣ ಗ್ರಾಮ ವಣಗೇರಿ ಮೂಲಸೌಕರ್ಯದಿಂದ ವಂಚಿತವಾಗಿದೆ. 1ರಿಂದ 8ನೇ ತರಗತಿವರೆಗೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಕೊಠಡಿ ಸೇರಿ ಇನ್ನಿತರ ಸೌಲಭ್ಯಗಳ ಕೊರತೆಯಿತ್ತು. ಇದನ್ನು ಗಮನಿಸಿದ ಶಿವನಮ್ಮದೇವಿ ದೇವಸ್ಥಾನದ ಟ್ರಸ್ಟ್ ಮುಖಂಡರು, ಗ್ರಾಮಸ್ಥರು ಸೇರಿ ದೇವಸ್ಥಾನದಲ್ಲಿ ದೇಣಿಗೆ ಡಬ್ಬಿಯಲ್ಲಿ ದಶಕಗಳಿಂದ ಸಂಗ್ರಹವಾಗುತ್ತ ಬಂದಿದ್ದ ₹20 ಲಕ್ಷ ಹಣವನ್ನು ಗ್ರಾಮದ ಶಾಲೆಯ ಕೊಠಡಿಗಳ ಅಭಿವೃದ್ಧಿಗೆ ವಿನಿಯೋಗಿಸಿ ಮೂರು ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ.
“ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಯಾರನ್ನೂ ದೇಣಿಗೆ ಕೇಳದೆ ಸ್ವತಃ ಗ್ರಾಮದವರೇ ಸೇರಿ, ದೇವಸ್ಥಾನದ ದೇಣಿಗೆ ಹಣವನ್ನೂ ಒಟ್ಟುಗೂಡಿಸಿ ಶಾಲಾ ಕೊಠಡಿ ನಿರ್ಮಿಸಿದ್ದೇವೆ. ಎಲ್ಲದಕ್ಕೂ ಸರ್ಕಾರವನ್ನು ನೆಚ್ಚಿ ಕುಳಿತರೆ ನಮ್ಮ ಮಕ್ಕಳ ಶಿಕ್ಷಣ ಮತ್ತಷ್ಟು ಕುಂಠಿತಗೊಳ್ಳುತ್ತದೆ. ಅದಕ್ಕೆ ಗ್ರಾಮದವರೇ ಸೇರಿಕೊಂಡು ಮೂರು ಕೊಠಡಿ ನಿರ್ಮಿಸಿದ್ದೇವೆ. ಮಕ್ಕಳ ಭವಿಷ್ಯಕ್ಕಿಂತ ಬೇರೆ ಏನೂ ಇಲ್ಲ” ಎಂಬುದು ಸ್ಥಳೀಯರ ಮಾತಾಗಿದೆ.