
ಹಾಸನ: ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪ್ರಪಥಮ ಬಾರಿಗೆ ಫೆಬ್ರವರಿ ೮ರಂದು ನಗರದ ಎಂ.ಜಿ ರಸ್ತೆಯ ಗಾಂಧಿ ಭವನ ಹಾಗೂ ಯೂಥ್ ಹಾಸ್ಟೆಲ್ ನಲ್ಲಿ ಉಚಿತ ಮೆಗಾ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಾತನಾಡಿದ ಅವರು, ನಾಡಿದ್ದು ಶನಿವಾರದಂದು ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾಲಯ ಆಸ್ಪತ್ರೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗೂ ಜಿಲ್ಲೆಯ ಎಲ್ಲಾ ಪತ್ರಿಕ ವಿತರಕರು ಮತ್ತು ಕುಟುಂಬಗಳಿಗೆ ಬೃಹತ್ ಆರೋಗ್ಯ ಶಿಬಿರವನ್ನು ಅಂದು ಬೆಳಗ್ಗೆ ೮ ಗಂಟೆಯಿಂದ ಸಂಜೆ ೫ ರವರೆಗೆ ಆಯೋಜಿಸಲಾಗಿದೆ .ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಜಿಯವರ ದಿವ್ಯ ಆಶೀರ್ವಾದದೊಂದಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದೊಂದಿಗೆ. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರ ಸಹಕಾರದಲ್ಲಿ ಶಿಬಿರ ನಡೆಯುತ್ತಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ ಗೋಪಾಲಸ್ವಾಮಿ ಶಿಬಿರದ ಆಯೋಜಕರಾಗಿದ್ದಾರೆ ಎಂದು ತಿಳಿಸಿದರು. ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ, ಬೆಂಗಳೂರಿನ ಕಿಮ್ಸ್, ನಿಮಾನ್ಸ್, ಕಿದ್ವಾಯಿ, ಮಂಗಳೂರಿನ ಯೆನೇಪೋಯ ಹಾಗೂ ಹಾಸನದ ಪ್ರಶಸ್ತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಸಹಕಾರ ದೊರೆಯಲಿದೆ ಎಂದರು. ಶಿಬಿರದಲ್ಲಿ ಉಚಿತ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗುತ್ತಿದ್ದು ಸುಮಾರು ನೂರಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಹೃದಯ, ನರರೋಗ, ಮೂತ್ರಪಿಂಡ, ಮಧುಮೇಹ ಪಿತ್ತ ಜನಕಾಂಗ,ಕ್ಯಾನ್ಸರ್ ತಪಾಸಣೆ, ಶಸ್ತ್ರಚಿಕಿತ್ಸೆ ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರು, ಕೀಲು ಮೂಳೆ ತಜ್ಞರು, ದಂತ, ಕಿವಿ ಮೂಗು ಗಂಟಲು, ಕಣ್ಣಿನ ತಜ್ಞರು ,ಮಕ್ಕಳ ತಜ್ಞರು ಚರ್ಮರೋಗ ಮಾನಸಿಕ ರೋಗ ತಜ್ಞರು ಭಾಗವಹಿಸುವರು ಎಂದರು. ಸ್ತ್ರೀಯರಿಗೆ ಬಿಳಿ ಸೆರಗು, ಬಂಜೆತನ, ಗರ್ಭಕೋಶದ ತೊಂದರೆ ಇನ್ನಿತರ ಸ್ತ್ರೀ ರೋಗಗಳಿಗೆ ನುರಿತ ವೈದ್ಯರಿಂದ ಚಿಕಿತ್ಸೆ ಒದಗಿಸಲಾಗುತ್ತಿದ್ದು ಉಚಿತವಾಗಿ ಇ ಸಿಜಿ, ರಕ್ತಪರೀಕ್ಷೆ ಎಕೋ ಸೇರಿದಂತೆ ಇತರೆ ಚಿಕಿತ್ಸೆ ಹಾಗೂ ಔಷಧಿ ಉಚಿತವಾಗಿ ನೀಡಲಾಗುವುದು. ತಪಾಸಣೆ ಬಳಿಕ ಮುಂದಿನ ಚಿಕಿತ್ಸೆಗೆ ವೈದ್ಯಕೀಯ ಸೌಲಭ್ಯ ಸಿಗಲಿದೆ. ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ಮಸೂರ ಅಳವಡಿಕೆ ವ್ಯವಸ್ಥೆ ಇದ್ದು, ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಕೋರಿದರು.
ಇದೆ ವೇಳೆ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಕೆ.ಎಂ. ಹರೀಶ್, ಖಜಾಂಚಿ ಕುಮಾರ್, ಕಾರ್ಯದರ್ಶಿ ಪಿ.ಎ. ಶ್ರೀನಿವಾಸ್, ಸಿ.ಬಿ. ಸಂತೋಷ್ ಇತರರು ಉಪಸ್ಥಿತರಿದ್ದರು.