
ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದ ಮಾಹಿತಿಯನ್ನು ತಿಳಿದು ತಡೆಯಲು ಬಂದ ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಶಾಸಕರೊಬ್ಬರ ಪುತ್ರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯೆಂದು ಹೇಳಲಾಗುತ್ತಿದ್ದು, ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದುದನ್ನು ತಡೆಯಲು ಬಂದ ಅವರಿಗೆ ಫೋನ್ ಕರೆಯ ಮೂಲಕ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕುತ್ತಿರುವವರು ಜಿಲ್ಲೆಯ ಶಾಸಕರೊಬ್ಬರ ಪುತ್ರ ಎನ್ನಲಾಗುತ್ತಿದೆ.
“ಎಲ್ಲಿಯವರೆಗೆ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ತಮ್ಮ ಕೆಲಸ ಮಾಡುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟ ಹಾಗೂ ಕ್ರಿಮಿನಲ್ ರಾಜಕಾರಣಿಗಳು ಅವರಿಗೆ ಬೆಲೆ ಕೊಡುವುದಿಲ್ಲ. ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಒಮ್ಮೆ ಬಹುಸಂಖ್ಯಾತ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದರೆ ಪೋಕರಿಗಳೆಲ್ಲ ತಮ್ಮ ಬಿಲ ಸೇರುತ್ತಾರೆ. ಇಲ್ಲವಾದರೆ ಅಲ್ಲೊಬ್ಬರು ಇಲ್ಲೊಬ್ಬರು ಪ್ರಾಮಾಣಿಕರು ಈ ರೀತಿಯ ದಾಳಿಗೆ ಒಳಗಾಗುತ್ತಾರೆ. ಮಿಕ್ಕ ಭ್ರಷ್ಟ ಅಧಿಕಾರಿಗಳು ಭ್ರಷ್ಟರ ಮನೆಯ ಕಕ್ಕಸುಗುಂಡಿ ತೊಳೆಯುತ್ತಾರೆ” ಎಂದು ಕೆಆರ್ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಕಿಡಿಕಾರಿದ್ದಾರೆ.
“ಸರ್ಕಾರ ಕೂಡಲೇ ಸಂತ್ರಸ್ತ ಅಧಿಕಾರಿಗೆ ರಕ್ಷಣೆ ಕೊಡಬೇಕು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಲೇ ಸುಮೊಟೊ ಪ್ರಕರಣ ದಾಖಲಿಸಿ ಬೆದರಿಕೆ ಹಾಕಿದ ನೀಚನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ರಾಜ್ಯಾದ್ಯಂತ ಇರುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ಈ ಮಹಿಳಾ ಅಧಿಕಾರಿಯ ಬೆಂಬಲಕ್ಕೆ ನಿಲ್ಲಬೇಕು” ಎಂದು ಒತ್ತಾಯಿಸಿದ್ದಾರೆ.
“ಶಿವಮೊಗ್ಗ ಜಿಲ್ಲೆಯ ಕೆಆರ್ಎಸ್ ಪಕ್ಷದ ಮುಖಂಡರು ಕೂಡಲೇ ಈ ಅಧಿಕಾರಿಯನ್ನು ಭೇಟಿ ಮಾಡಿ ನೈತಿಕ ಬೆಂಬಲ ನೀಡಬೇಕು ಮತ್ತು ಅವರು ಪೊಲೀಸರಿಗೆ ದೂರು ನೀಡುವಂತೆ ಒತ್ತಾಯಿಸಬೇಕು” ಎಂದು ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ.