
ಮೈಸೂರಿನ ಉದಯಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದು, “2047ರ ಹೊತ್ತಿಗೆ ಭಾರತವನ್ನು ಇಸ್ಲಾಂ ದೇಶವನ್ನಾಗಿ ಮಾಡುವ ಸಲುವಾಗಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಮಾಡಿದ್ದಾರೆ. ಈ ರೀತಿ ಭಯಾನಕ ವಾತಾವರಣ ಸೃಷ್ಟಿ ಮಾಡಲು ಮುಂದಾಗುತ್ತಿದ್ದಾರೆ. ಮುಸ್ಲಿಮರು ದಾಂಧಲೆ ಮಾಡೋಕೆ ಇದು ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಅಲ್ಲ ” ಎಂದಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಪ್ಪು ಮಾಡಿದ್ದರೆ ಅದಕ್ಕೆ ಶಿಕ್ಷೆ ನೀಡಲು ಕಾನೂನು, ಸಂವಿಧಾನ ಇದೆ. ನೀವು ಬೇಕಾದರೆ ದೂರು ನೀಡಬೇಕಿತ್ತು. ಇಲ್ಲವೇ ಧರಣಿ ಮಾಡಬೇಕಿತ್ತು ಅದನ್ನು ಬಿಟ್ಟು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಮಾಡುವುದು ಪೊಲೀಸರಿಗೆ ಕಲ್ಲು ಹೊಡೆಯುವುದನ್ನು ಬಿಡಬೇಕು” ಎಂದಿದ್ದಾರೆ.
“ಉದಯಗಿರಿ ಮುಸ್ಲಿಮರೇ ಜಾಸ್ತಿ ಇರುವ ಏರಿಯಾವಾಗಿದ್ದು, ಅಲ್ಲಿ ಈ ಘಟನೆ ನಡೆದಿದೆ. ತಪ್ಪು ಮಾಡಿದವನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕಾನೂನು ಇದೆ ಸಂವಿಧಾನ ಇದೆ ತಪ್ಪಿತಸ್ಥನಿಗೆ ಶಿಕ್ಷೆಯಾಗುತ್ತದೆ. ಅದನ್ನು ಬಿಟ್ಟು ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದು ಎಷ್ಟು ಸರಿ. ಇದು ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾ ದೇಶ ಅಲ್ಲ. ನಿಮಗೆ ಏನಾದರು ತೊಂದರೆಯಾಗಿದ್ದರೆ ದೂರು ನೀಡಿ, ಧರಣಿ ಮಾಡಿ. ಅದನ್ನು ಬಿಟ್ಟು ಗಲಬೆ ಮಾಡುವುದಲ್ಲ” ಎಂದು ಕಿಡಿಕಾರಿದರು.
“ನೀವು ಎಷ್ಟು ಬಾರಿ ಹಿಂದೂ ದೇವರುಗಳ ಮೇಲೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ನಾವೂ ಕೂಡ ಈ ರೀತಿ ಎದ್ದರೇ ಏನಾಗಬಹುದು ಹೇಳಿ? ನೀವು ಏನನ್ನಾದರೂ ಮಾಡಬಹುದು ಎಂದುಕೊಂಡರೆ ಹಿಂದೂ ಸಮಾಜ ಉತ್ತರ ನೀಡುತ್ತದೆ. ರಕ್ಷಕರ ಮೇಲೆ ಕಲ್ಲು ತೂರಾಟ ಮಾಡಿದರೆ ಎಲ್ಲಿದೆ ವ್ಯವಸ್ಥೆ? ನಾಳೆ ಬೇಲ್ ತೆಗೆದುಕೊಂಡು ವಾಪಸ್ ಬಂದು ಮತ್ತೆ ಇದೇ ಕೆಲಸ ಮಾಡುತ್ತಾರೆ” ಎಂದರು.
“ಕಾಂಗ್ರೆಸ್ ವೋಟ್ ಬ್ಯಾಂಕ್ಗಾಗಿ ಈ ರೀತಿ ಮುಸ್ಲಿಂ ಗೂಂಡಗಳಿಗೆ ಕುಮ್ಮಕ್ಕು ಕೊಡುತ್ತ ಬಂದಿದೆ. ಈ ಕುಮ್ಮಕ್ಕಿನಿಂದ ಕೆಜಿ ಹಳ್ಳಿ ಡಿಜೆ ಹಳ್ಳಿ, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಘಟನೆಗಳಲ್ಲಿ ಪೊಲೀಸರು ಓಡಿ ಹೋಗುವಂತಾಗಿದೆ. ಕೂಡಲೇ ಪೊಲೀಸರಿಗೆ ಬಿಟ್ಟರೆ ಅವರು ಕೆಲಸ ಮಾಡುತ್ತಾರೆ” ಎಂದು ಸಂವಿಧಾನ ಬಾಹಿರವಾಗಿ ಮಾತನಾಡಿದ್ದಾರೆ.