ಹಾಸನ: ತಮ್ಮ ಜೀವವನ್ನು ಲೆಕ್ಕಿಸದೇ ಶ್ರಮವಹಿಸಿ ದೇಶ ಸೇವೆ ಮಾಡುವವರನ್ನು ಮರೆಯಬಾರದು. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಸಹಕಾರದಲ್ಲಿ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವರೊಂದಿಗೆ ಗಮನಸೆಳೆದು ಸ್ಪಂದಿಸುವ ಕೆಲಸ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.
ನಗರದ ಹೊರವಲಯ ಕೆಂಚಟ್ಟಹಳ್ಳಿಯಲ್ಲಿ ನಿರ್ಮಿಸಿರುವ ನಿವೃತ್ತ ಅರೆಸೇನಾ ಪಡೆ ಯೋಧರ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅರೆಸೇನಾ ಯೋಧರು, ದೇಶ ಸೇನೆಯ ಮೂರು ವಿಭಾಗಗಳ ಯೋಧರು ಮಾಡುವ ಕೆಲಸವನ್ನು ಮಾಡುತ್ತಾರೆ.
ಅರೆಸೇನಾ ಪಡೆಯ ಕಾರ್ಯವನ್ನು, ಜೀವ ಲೆಕ್ಕಿಸದೆ ಶ್ರಮವಹಿಸಿ ಮಾಡುವ ಕೆಲಸವನ್ನೂ ಸರ್ಕಾರ ಮರೆಯಬಾರದು.ನಾನು ಅರೆಸೇನಾ ಪಡೆಯ ಕುಟುಂಬದ ನೋವು ಅರಿತುಕೊಂಡಿದ್ದೇನೆ. ಸೈನಿಕರ ಆರೋಗ್ಯ ಶಿಬಿರಕ್ಕೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು. ಉಳಿದ ನಿಮ್ಮ ಬೇಡಿಕೆ ಈಡೇರಿಕೆಗೆ ಸ್ವಲ್ಪ ಸಮಯ ಕೊಡಿ, ದೇವೇಗೌಡರ ಸಹಕಾರದಿಂದ ಕೇಂದ್ರ ಸರ್ಕಾರದ ಗಮನ ಸೆಳೆದು ಸ್ಪಂದಿಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಕಾರ್ಖಾನೆ, ಗಡಿಯಲ್ಲಿ ಅರೆಸೇನಾ ಪಡೆಯ ಕಾರ್ಯವನ್ನು ಗಮನಿಸಿದ್ದೇನೆ. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಅರೋಗ್ಯ ಸಮಸ್ಯೆ ನಡುವೆಯೂ ನಿಮ್ಮೊಂದಿಗೆ ಇದ್ದು, ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲು ಬಂದಿದ್ದೇನೆ ಎಂದ ಅವರು, ದೇಶದ ಒಳಗಿರುವ ರಾಜಕಾರಣಿಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದು ನೀವೆಲ್ಲ ಗಮನಿಸುತ್ತಿದ್ದೀರಿ.
ನಾನು ಎರಡು ಬಾರಿ ಸಿಎಂ ಆದರೂ ಹೆಚ್ಚು ಸಮಯ ಸಿಗಲಿಲ್ಲ. ಪೂರ್ಣಾವಧಿ ಸಿಕ್ಕಿದ್ದರೆ ಮಾದರಿ ಸರ್ಕಾರ ನಡೆಸುತ್ತಿದ್ದೆ. ಅದು ನನ್ನ ದುರಾದೃಷ್ಟ ಎಂದು ಭಾವಿಸುವುದಿಲ್ಲ ಎಂದರು. ನನಗೆ ಸಿಎಂ ಆಗಿ ಅದಿಕಾರ ನಡೆಸಲು ಎರಡು ಬಾರಿ ಅವಕಾಶ ಸಿಕ್ಕಿದ್ದು, ಬಹಳ ಕಡಿಮೆ ಸಮಯ ಈ ನಾಡಿನ ಜನ ನನಗೆ ಪೂರ್ಣ ಅವದಿ ಕೊಡಲಿಲ್ಲ. ಕೊಟ್ಟಿದ್ದರೆ. ಪೂರ್ಣವಧಿಯಾಗಿ ಈ ರಾಜ್ಯವನ್ನು ಮಾದರಿ ರಾಜ್ಯವಾಗಿ ಮಾಡಿ ತೋರಿಸುತ್ತಿದ್ದೆ. ನಮ್ಮ ಪಕ್ಷ ಮುಗಿದೆ ಹೋಯ್ತು ಅಂದ್ರು. ಈಗ ಮತ್ತ ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದಾನೆ. ಆಂದ್ರದಲ್ಲಿ ಮುಚ್ಚೇ ಹೋಗಿದ್ದ ಒಂದು ಫ್ಯಾಕ್ಟರಿ ಮರು ಆರಂಭ ಮಾಡಿದೆನೆ. ಅಲ್ಲಿ ಜನ ನನ್ನ ಫೋಟೊಗೆ ಹಾಲಿನ ಅಭಿಷೇಕ ಮಾಡ್ತಾರೆ. ರಾಜ್ಯದಲ್ಲಿ ವಿಶ್ವೇಶ್ವರಯ್ಯ ಫ್ಯಾಕ್ಟರಿ ಉಳಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರ ಆಶಿರ್ವಾದದಿಂದ ಇಂದು ಸೈನಿಕರ ಭವನ ಉದ್ಘಾಟನೆಗೊಂಡಿದೆ. ಜಿಲ್ಲೆಯಲ್ಲಿ ಇಂಜಿನಿಯರಿAಗ್, 11ಕ್ಕೂ ಹೆಚ್ಚು ಡಿಪ್ಲೊಮಾ ಕಾಲೇಜುಗಳಿವೆ. ಬೇರೆ ಬೇರೆ ದೇಶಗಳಿಗೆ ಹಾಗೂ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಬೇಕಾಗಿದೆ. ಮುಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಿ, ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಮನವಿ ಪತ್ರವನ್ನು ಕುಮಾರಸ್ವಾಮಿ ಅವರಿಗೆ ನೀಡಿ ಕೋರಿದರು.