
ನಟಿ ಸ್ವರಾ ಭಾಸ್ಕರ್ ಅವರ ಎಕ್ಸ್ (ಟ್ವಿಟರ್) ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದ ಬಳಿಕ ಸಾಮಾಜಿಕ ಮಾಧ್ಯಮ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು, “ಎರಡು ನಿರ್ದಿಷ್ಟ ಚಿತ್ರಗಳಿಗೆ ಸಂಬಂಧಿಸಿದ ಕೃತಿಸ್ವಾಮ್ಯ ಉಲ್ಲಂಘನೆಯ ಆರೋಪದ ಮೇಲೆ ತನ್ನ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಈ ನಿರ್ಧಾರ ಹಾಸ್ಯಾಸ್ಪದ ಹಾಗೂ ಅಸಮರ್ಥನೀಯ” ಎಂದು ಬರೆದುಕೊಂಡಿದ್ದಾರೆ.
ಸ್ವರಾ ಅವರು, ಗಣರಾಜ್ಯೋತ್ಸವದ ದಿನ ಹಿಂದಿಯ ಜನಪ್ರಿಯ ಘೋಷಣೆ “ಗಾಂಧಿ, ನಮಗೆ ಅವಮಾನವಾಗುತ್ತಿದೆ; ನಿನ್ನ ಕೊಂದವರು ಇನ್ನೂ ಜೀವಂತವಾಗಿದ್ದಾರೆ” ಎನ್ನುವ ಸಾಲುಗಳನ್ನು ಹಂಚಿಕೊಂಡಿದ್ದರು. ಜತೆಗೆ ತಮ್ಮ ಮಗು ಭಾರತದ ಧ್ವಜವನ್ನು ಹಿಡಿದುಕೊಂಡಿರುವ ಚಿತ್ರವನ್ನು ಶೇರ್ ಮಾಡಿದ್ದರು. ಪೋಸ್ಟ್ನಲ್ಲಿ ಮಗುವಿನ ಮುಖವನ್ನು ಮರೆಮಾಚಲಾಗಿತ್ತು.
“ನನ್ನ ಪೋಸ್ಟ್ ಹೇಗೆ ಹಕ್ಕು ಉಲ್ಲಂಘನೆಯಾಗುತ್ತದೆ? ನನ್ನ ಮಗುವಿನ ಚಹರೆ ಮೇಲೆ ಯಾರು ಹಕ್ಕು ಸಾಧಿಸುವವರಿದ್ದಾರೆ? ಈ ಎರಡು ಅಂಶಗಳ ಮೇಲೆ ನನ್ನ ಖಾತೆ ಸ್ಥಗಿತಗೊಳಿಸಿದ್ದು ನಿಜಕ್ಕೂ ಹಾಸ್ಯಾಸ್ಪದ. ತರ್ಕಬದ್ಧ, ತಾರ್ಕಿಕ ಹಾಗೂ ವಸ್ತುನಿಷ್ಠ ನೆಲಗಟ್ಟಿನಲ್ಲಿ ಇಂಥ ಆರೋಪಗಳು ಕಾನೂನಿನಡಿಯಲ್ಲೂ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗುವುದಿಲ್ಲ. ಖಾತೆಯನ್ನು ಅಮಾನತಿನಲ್ಲಿಡುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು” ಎಂದು ಸ್ವರಾ ಅವರು ಎಕ್ಸ್ ತಂಡಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿದ್ದೀರಾ? ಕಿಂಗ್ ಕೊಹ್ಲಿ ಆಟ ನೋಡಲು ಕಿಕ್ಕಿರಿದು ಬಂದ ಅಭಿಮಾನಿಗಳು
“ಸಾಮೂಹಿಕ ವರದಿಗಾರಿಕೆಯು ಖಾತೆಯನ್ನು ಅಮಾನತುಗೊಳಿಸಲು ಕಾರಣವಾಗಿರಬಹುದು. ಇದು ನಮ್ಮ ಬಾಯಿ ಮುಚ್ಚಿಸುವ ಪ್ರಯತ್ನ. ಈ ಟ್ವೀಟ್ಗಳು ಸಾಮೂಹಿಕವಾಗಿ ವರದಿಯಾಗಿದ್ದರೆ, ಅದು ನನಗೆ ಕಿರುಕುಳ ನೀಡುವ ಮತ್ತು ನನ್ನ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತನ್ನ ಬಹಿರಂಗ ರಾಜಕೀಯ ದೃಷ್ಟಿಕೋನಗಳಿಗೆ ಹೆಸರುವಾಸಿಯಾದ ಸ್ವರಾ ಭಾಸ್ಕರ್ ಆಗಾಗ್ಗೆ ಆನ್ ಲೈನ್ ಟೀಕೆಗಳನ್ನು ಎದುರಿಸುತ್ತಿದ್ದಾರೆ.