
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ(ಎಚ್ಡಿಕೆ) ಸೇರಿದಂತೆ ಹಲವು ರಾಜಕಾರಣಿಗಳ ವಿರುದ್ಧವಿರುವ ಸರ್ಕಾರಿ ಜಮೀನು ಅತಿಕ್ರಮಣ ಆರೋಪ ಪ್ರಕರಣದಲ್ಲಿ ಏನೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಕಿಡಿಕಾರಿದ್ದು, ತರಾಟೆಗೆ ತೆಗೆದುಕೊಂಡಿದೆ.
‘‘ಪ್ರತಿವಾದಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಐದು ವರ್ಷ ಏನೂ ಕ್ರಮ ಕೈಗೊಂಡಿಲ್ಲವೇ? ಇನ್ನೆರಡು ವಾರ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಕ್ರಮ ಕೈಗೊಂಡರೆ ಸರಿ. ಇಲ್ಲವಾದರೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇನೆ. ಸ್ವಲ್ಪ ದಿನ ಜೈಲಿನಲ್ಲಿದ್ದು ಬಂದರೆ ಸರಿಹೋಗ್ತೀರಿ’’ ಎಂದು ನ್ಯಾಯಾಲಯ ಖಾರವಾಗಿ ಕುಟುಕಿತು.
ಲೋಕಾಯುಕ್ತ ನೀಡಿರುವ ಆದೇಶ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆಯೆಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ನ್ಯಾಯಮೂರ್ತಿ ಕೆ ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಅರ್ಜಿ ವಿಚಾರಣೆ ವೇಳೆ ಖುದ್ದು ಹಾಜರಿದ್ದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರನ್ನು ನ್ಯಾಯಾಲಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯವು ಒಂದು ಹಂತದಲ್ಲಿ ‘‘ನಿಮ್ಮ ವಿರುದ್ಧ ಈಗಲೇ ನ್ಯಾಯಾಂಗ ನಿಂದನೆಯ ಆರೋಪ ನಿಗದಿಗೊಳಿಸುವ ಪ್ರಕ್ರಿಯೆ ಆರಂಭಿಸಲಾಗುವುದು’’ ಎಂದು ಕಿಡಿಕಾರಿ ‘‘ನೀವೆಲ್ಲಾ ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವವರೆಗೆ ನಿಮ್ಮ ಸಂಬಳ ಕಡಿತಗೊಳಿಸಿದರೆ ಗೊತ್ತಾಗುತ್ತದೆ’’ ಎಂದು ಎಚ್ಚರಿಸಿದರು.
ನ್ಯಾಯಮೂರ್ತಿ ಸೋಮಶೇಖರ್, ‘‘ಅಧಿಕಾರಿಗಳಿಗೆ ನ್ಯಾಯಾಂಗದ ಭಾಷೆಯೇ ಅರ್ಥವಾಗುತ್ತಿಲ್ಲ. ನೋಡಿ ನೀವು ಹೇಳಿದ್ದನ್ನೆಲ್ಲಾ ನಾನು ಬರೆದುಕೊಳ್ತೇನೆ. ಸತ್ಯ ಹೇಳಿದರೂ ಸರಿ, ಸುಳ್ಳು ಹೇಳಿದರೂ ಸರಿ. ಅವಕಾಶ ಸಿಕ್ಕರೆ ನಿಮ್ಮನ್ನೆಲ್ಲಾ ಫಿಕ್ಸ್ ಮಾಡಿಬಿಡ್ತೀನಿ’’ ಎಂದು ಎಚ್ಚರಿಕೆ ನೀಡಿದರು.
ಕಠಾರಿಯಾ, ‘‘ಸರ್, ವ್ಯವಸ್ಥೆ ತುಂಬಾ ಕೆಟ್ಟು ಹೋಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ, ಸರ್ಕಾರ ತನ್ನೆಲ್ಲ ಪ್ರಯತ್ನ ಮಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ ನಾವು 14 ಲಕ್ಷ ಎಕರೆಗೂ ಅಧಿಕ ಆಕ್ರಮಿತ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ’’ ಎಂದರು.
ನ್ಯಾಯಪೀಠ, ‘‘ಇ-ಖಾತಾ ಎಂಬುದೇ ಭ್ರಷ್ಟಾಚಾರದ ಆಗರ. ನಮ್ಮಲ್ಲಿ ಮಾನಸಿಕ ಭ್ರಷ್ಟಾಚಾರ, ಪೂರ್ವಗ್ರಹಪೀಡಿತ ಭಾವನೆಯ ಭ್ರಷ್ಟಾಚಾರ, ಹಣದ ಭ್ರಷ್ಟಾಚಾರ ಎಂಬೆಲ್ಲಾ ಶ್ರೇಣೀಕೃತ ವ್ಯವಸ್ಥೆಯಿದೆ. ಮೊದಲು ಅವುಗಳಿಂದ ಹೊರಬನ್ನಿ,’’ ಎಂದು ಹೇಳಿತು.
‘‘ಇನ್ನೆರಡು ವಾರಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರೊಳಗೆ ಪಾಲಿಸಿದರೆ ಸರಿ. ಇಲ್ಲವೆಂದರೆ ಎಲ್ಲ ಪ್ರತಿವಾದಿಗಳನ್ನೂ ಎಸ್ಕಾರ್ಟ್ ಕೊಟ್ಟು ಕರೆಯಿಸಿಬಿಡುತ್ತೇನೆ. ಅಧಿಕಾರಿಗಳನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇನೆ’’ ಎಂದು ಅಬ್ಬರಿಸಿದರಲ್ಲದೆ, ಪ್ರಕರಣದಲ್ಲಿ ಸಂವಿಧಾನ ಕರಡು ತಜ್ಞರ ಸಮಿತಿ ಮತ್ತು ಎಂ ಎನ್ ರಾಯ್ ಅವರ ಉದಾಹರಣೆಗಳನ್ನು ನೀಡುತ್ತ, ‘‘ಯಾವುದಾದರೂ ವಿಷಯಕ್ಕೆ ಎಸ್ಐಟಿ ರಚಿಸುವುದು ಸರ್ಕಾರಕ್ಕೆ ರೂಢಿಯಾಗಿಬಿಟ್ಟಿದೆ’’ ಎಂದು ಚಾಟಿ ಬೀಸಿದರು.
ಅರ್ಜಿದಾರ ಪರ ಹಾಜರಿದ್ದ ಹಿರಿಯ ವಕೀಲ ಎಸ್ ಬಸವರಾಜ್, ‘‘ಕೇತಗಾನಹಳ್ಳಿ ವ್ಯಾಪ್ತಿಯ 14 ಎಕರೆ ಸರ್ಕಾರಿ ಜಮೀನನ್ನು ಎಚ್ ಡಿ ಕುಮಾರಸ್ವಾಮಿ ಹಾಗೂ ಮತ್ತಿತರರು ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್ ಮತ್ತು ಸಂಬಂಧಿಸಿದ ಕಂದಾಯ ಅಧಿಕಾರಿಗಳು ಗುರುತಿಸಿದ್ದಾರೆ. ಅಂತೆಯೇ, ಲೋಕಾಯುಕ್ತರು ಒತ್ತುವರಿ ತೆರವು ಸಂಬಂಧ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿಲ್ಲ,’’ ಎಂದರು. ಕೊನೆಗೆ ನ್ಯಾಯಾಲಯ ಸರ್ಕಾರಕ್ಕೆ ಸಮಯ ನೀಡಿ ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಿತು.