
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ, ದುರ್ಗಾ ವಾಹಿನಿ ಸಂಸ್ಥಾಪಕಿ, ಹಿಂದುತ್ವವಾದಿ ನಾಯಕಿ ಋತಂಭರಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಇದು ಮಾತ್ರವಲ್ಲದೆ ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದವರಿಗೂ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ ಮತ್ತು ವೇದ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಈ ಬಾರಿ ಪದ್ಮ ಪ್ರಶಸ್ತಿಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಮತ್ತು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರಿಗೂ ನೀಡಲಾಗಿದೆ. ಸಮಾಜ ಸೇವೆ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ಘಟಕ ದುರ್ಗಾ ವಾಹಿನಿಯ ಸಂಸ್ಥಾಪಕಿ ಋತಂಭರ ಅವರಿಗೆ ಘೋಷಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕೆಂಬ ಅಭಿಯಾನವನ್ನು ಮಾಡುತ್ತಿದ್ದ 1980-1990ರ ದಶಕದಲ್ಲಿ ದೇಶಾದ್ಯಂತ ಹಲವು ಕಡೆ ಋತಂಭರ ಉದ್ರೇಕಕಾರಿ ಭಾಷಣಗಳನ್ನು ಮಾಡಿದ್ದರು. ಇದಾದ ಬಳಿಕ 1992ರ ಡಿಸೆಂಬರ್ 6ರಂದು ದುಷ್ಕರ್ಮಿಗಳು ಬಾಬರಿ ಮಸೀದಿಯನ್ನು ನಾಶ ಮಾಡಿದ್ದರು. ಬಾಬರಿ ಮಸೀದಿ ಧ್ವಂಸದ ವೇಳೆ ಸ್ಥಳದಲ್ಲಿದ್ದ ಹಿಂದುತ್ವ ನಾಯಕರಲ್ಲಿ ಋತಂಭರ ಕೂಡಾ ಸೇರಿದ್ದರು. ಇದಾದ ಬಳಿಕ ದೇಶಾದಾದ್ಯಂತ ಕೋಮುಗಲಭೆ ಎದ್ದಿತ್ತು.
ಈ ನಡುವೆ ಮಸೀದಿ ಧ್ವಂಸವಾದ ಮೂರು ದಿನದಲ್ಲೇ ಋತಂಭರ ಬಂಧನವಾಗಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐನ 32 ಆರೋಪಿಗಳಲ್ಲಿ ಋತಂಭರ ಕೂಡ ಒಬ್ಬರಾಗಿದ್ದರು. 2020ರ ಸೆಪ್ಟೆಂಬರ್ನಲ್ಲಿ ಈ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
ಇದನ್ನೂ ಓದಿದ್ದೀರಾ? ರಾಯಚೂರು | ಕಲ್ಯಾಣ ಕರ್ನಾಟಕದ ಹಲವು ಸಮಸ್ಯೆ ಬಗೆಹರಿಸುವಂತೆ ಆಗ್ರಹ; ಕೂಲಿಕಾರ್ಮಿಕರ ಅನಿರ್ದಿಷ್ಟಾವಧಿ ಪ್ರತಿಭಟನೆ
ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾ ದಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಪದ್ಮ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರದಾನ ಮಾಡಲಿದ್ದಾರೆ. ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ.
ದೇಶದ ಅತೀ ಗೌರವಯುತ ಪ್ರಶಸ್ತಿಯಾದ ಪದ್ಮವನ್ನು ದ್ವೇಷ ಭಾಷಣ, ಉದ್ರೇಕಕಾರಿ ಭಾಷಣ ಮಾಡಿ ಸಮಾಜದಲ್ಲಿ ಗದ್ದಲ ಸೃಷ್ಟಿಸಿದ, ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾದವರಿಗೆ ಘೋಷಿಸಿರುವುದು ವಿಪರ್ಯಾಸ. ಇದು ಸಮಾಜ ಕಟ್ಟುವಲ್ಲಿ ಕೊಡುಗೆ ನೀಡಿದ, ಸಾಧನೆ ಮಾಡಿದವರಿಗೆ ನೀಡಬೇಕಾದ ಪ್ರಶಸ್ತಿಯೇ ಹೊರತು ಧರ್ಮದ ಹೆಸರಲ್ಲಿ ಸಮಾಜ ಒಡೆದವರಿಗೆ ನೀಡುವ ಪ್ರಶಸ್ತಿಯಲ್ಲ.