
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್ ಕಂಪೆನಿ ಸಿಬ್ಬಂದಿ, ಒಂದು ತಿಂಗಳ ಬಾಣಂತಿ ಹಾಗೂ ಹಸುಗೂಸು ಸೇರಿದಂತೆ ಮನೆಯ ಎಲ್ಲರನ್ನೂ ಹೊರಗೆ ಹಾಕಿದ್ದು, ಪಾತ್ರೆ, ಬಟ್ಟೆಗಳನ್ನೆಲ್ಲ ಹೊರಗೆ ಎಸೆದು ಅವಮಾನವಿಯವಾಗಿ ನಡೆದುಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ್ ಅವರ ಮನೆಯನ್ನು ಜಪ್ತಿ ಮಾಡಲಾಗಿದೆ. ಗಣಪತಿಯವರು ಐದು ವರ್ಷಗಳ ಹಿಂದೆ ಮನೆ ನಿರ್ಮಾಣಕ್ಕೆಂದು ಖಾಸಗಿ ಫೈನಾನ್ಸ್ನಿಂದ ₹5 ಲಕ್ಷ ಸಾಲ ಪಡೆದಿದ್ದರು. ನಿರಂತರ ಮೂರು ವರ್ಷ ಕಂತುಗಳನ್ನು ಸರಿಯಾಗಿಯೇ ಪಾವತಿಸಿದ್ದಾರೆ.
ವೃದ್ಧ ತಾಯಿಗೆ ಅನಾರೋಗ್ಯ, ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಫೈನಾನ್ಸ್ ಕಂಪನಿಯು ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೇ ಮನೆ ಖಾಲಿಮಾಡಿಸಿದೆ. ಇದರಿಂದಾಗಿ ಬಾಣಂತಿ ಸೆರಿದಂತೆ ಕುಟುಂಬದವರೂ ಉಪವಾಸ ಕಳೆಯುವಂತಾಗಿದೆ. ಬಾಣಂತಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯಾಗಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.