
ಹಾಸನ: ಹಾಸನ ನಗರ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಅಕ್ರಮ ಸುಂಕ ವಸೂಲಿ ಹಾಗೂ ಅವರ ಮೇಲೆ ದೌರ್ಜನ್ಯ ಪ್ರಕರಣಗಳು ಕಂಡು ಬಂದರೆ ಅಂತವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಂ.ಚಂದ್ರಗೌಡ ಎಚ್ಚರಿಸಿದರು. ನಗರಸಭೆ ಕುವೆಂಪು ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮಾಜಿ ಅಧ್ಯಕ್ಷ ಆರ್.ಮೋಹನ್ ಅವರ ಅಕ್ರಮ ಸುಂಕ ವಸೂಲಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಕ್ರಮ ಸುಂಕ ವಸೂಲಿ ಹಾಗೂ ವ್ಯಾಪಾರಿಗಳ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ. ಅಂತವರ ಬಗ್ಗೆ ಮಾಹಿತಿ ಬಂದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದರು.
ಮಾಜಿ ಅಧ್ಯಕ್ಷ ಆರ್.ಮೋಹನ್ ಮಾತನಾಡಿ, ಸೆಪ್ಟಂಬರ್ 30ರ ತನಕ ಬೀದಿಬದಿ ವ್ಯಾಪಾರಿಗಳಿಂದ ಸುಂಕ ವಸೂಲಿ ಗುತ್ತಿಗೆ ಮುಗಿದಿದೆ. ಮುಂದಿನ ಟೆಂಡರ್ ಕರೆಯುವವರೆಗೂ ಸುಂಕ ವಸೂಲಾತಿ ಮಾಡುವ ಆಗಿಲ್ಲ. ಎಂಬ ಬಗ್ಗೆ ಈ ಹಿಂದಿನ ಸಭೆಯಲ್ಲಿ ಚರ್ಚೆ ಆಗಿದ್ದರೂ ಈ ವರೆಗೆ ಸುಂಕ ವಸೂಲಾತಿ ಮುಂದುವರೆದಿದೆ. ಹಣ ನೀಡದವರ ಅಂಗಡಿಗಳಲ್ಲಿನ ವಸ್ತುಗಳು ಹಣ್ಣು ತರಕಾರಿಗಳನ್ನು ಬೀದಿಗೆ ಎಸೆಯುವ ಮೂಲಕ ಅಮಾನವೀಯವಾಗಿ ವರ್ತನೆ ಮಾಡುತ್ತಿರುವ ಗುತ್ತಿಗೆದಾರರು ಹಬ್ಬ ಹರಿದಿನಗಳಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಸುಂಕದ ರೂಪದಲ್ಲಿ ಪಡೆಯುತ್ತಿದ್ದಾರೆ ಎಂಸು ಆರೋಪಿಸಿದರು.
ಸದಸ್ಯರಾದ ಸಂತೋಷ್ ಹಾಗೂ ರಕ್ಷಿತ್ ಮಾತನಾಡಿ, ನಗರಸಭೆ ಆವರಣದಲ್ಲಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳು ಸಿಬ್ಬಂದಿಗಳಿಗೆ ಕುಡಿಯುವ ನೀರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು ಮತ್ತು ಶೌಚಾಲಯದ ಸಮಸ್ಯೆಯಿಂದ ಮಹಿಳೆಯರಿಗೆ ಮಕ್ಕಳಿಗೆ ಸಮಸ್ಯೆ ಆಗುತ್ತಿದ್ದು ಕೂಡಲೇ ನಗರಸಭೆ ವತಿಯಿಂದ ಸುಸಜ್ಜಿತ ಶೌಚಾಲಯ ಹಾಗೂ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ನಗರವನ್ನೇಲ್ಲಾ ಸ್ವಚ್ಚ ಮಾಡುವ ನಗರಸಭೆ ಸಭಾಂಗಣದಲ್ಲೆ ಹಲವು ಸಮಸ್ಯೆಗಳಿವೆ, ಕುವೆಂಪು ಸಭಾಂಗಣದಲ್ಲಿನ ಪೀಠೋಪಕರಣಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು, ಸೀಟುಗಳು ಬಿದ್ದು ಹೋಗಿದೆ. ಕಸ ಸಾಗಣೆ ವಾಹನಗಳು ಇಂಧನದ ಕೊರತೆ ಎಂಬ ಕಾರಣ ಹೇಳಿ ಹಲವು ಬಡಾವಣೆಗಳ ಕಸ ಸಂಗ್ರಹಿಸಿಲ್ಲ.
ಈ ಬಗ್ಗೆ ನಗರಸಭೆ ಅಧ್ಯಕ್ಷರು ಗಮನಹರಿಸಬೇಕು, ಹಲವು ವಾಹನಗಳು ದುಸ್ಥಿತಿಯಲ್ಲಿ ಇದ್ದು ಅವುಗಳನ್ನು ರಿಪೇರಿ ಮಾಡಿಸಿ ಸುಸ್ಥಿತಿಯಲ್ಲಿ ಇಡಬೇಕು, ಇನ್ನು ನಗರಸಭೆ ಮಾಡುವುದಾದರೇ ಬೆಳಿಗ್ಗೆ 9:30ಕ್ಕೆ ಪ್ರಾರಂಭಿಸಿ, ಮದ್ಯಾಹ್ನ 12:30ಕೆ ಮೀಟಿಂಗ್ ಇಡಬೇಡಿ. ಇಲ್ಲಿ ಸದಸ್ಯರು ಅನೇಕರು ಶುಗರ್ ಪೇಸೆಂಟ್ ಇರುತ್ತಾರೆ ಎಂದು ಸಲಹೆ ನೀಡಿದರು. ಸದಸ್ಯ ಆರ್. ಮೋಹನ್ ಅವರು ಮಾತನಾಡಿ ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಮೂರು ಬಾರಿ ನೋಟಿಸ್ ಜಾರಿ ಮಾಡಲಾಯಿತು ಆದರೂ ಯಾವುದೇ ಕ್ರಮ ಆಗಿಲ್ಲ ಈಗಲಾದರೂ ನೂತನ ಆಡಳಿತ ಮಂಡಳಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಒತ್ತುವರಿ ತರವು ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ ಮಾತನಾಡಿ ಶುಭೋದಯ ಕಲ್ಯಾಣ ಮಂಟಪದ ಪಕ್ಕದಲ್ಲಿ ಹಾದು ಹೋಗಿರುವ ರಾಜ ಕಾಲುವೆ ಮೇಲೆಯೇ ಅಕ್ಷಯ ಲಾಡ್ಜ್ ಕಟ್ಟಡ ನಿರ್ಮಾಣವಾಗಿದೆ. ಇದನ್ನು ತೆರವು ಮಾಡಬೇಕು ಎಂದು ನ್ಯಾಯಾಲಯದಿಂದಲೂ ಆದೇಶವಾಗಿದೆ. ನಗರಸಭೆ ಅಧಿಕಾರಿಗಳು ಹಾಗೂ ಆಡಳಿತ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು. ನಗರಸಭೆ ಆಸ್ತಿ ಎಲ್ಲೇ ಒತ್ತುವರಿಯಾಗಿದ್ದರು ತೆರವಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಧ್ಯಕ್ಷರಲ್ಲಿ ಆಗ್ರಹಿಸಿದರು.
ನಗರಸಭೆಗೆ ಸೇರಿದ ಜಾಗವನ್ನು ಖಾಸಗಿ ಶಾಲೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಒತ್ತುವರಿ ಮಾಡಿದ್ದಾರೆ, ಕೂಡಲೇ ಅದನ್ನು ತೆರವು ಮಾಡುವ ಕೆಲಸ ಮಾಡಬೇಕು ಎಂದು ಇತರ ಸದಸ್ಯರು ಮನವಿ ಮಾಡಿದರು. ಬಳಿಕ ಸಭೆಯಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ವಿದ್ಯುತ್, ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದವು.
ನಗರಸಭೆ ಆಯುಕ್ತ ರಮೇಶ್ ಮಾತನಾಡಿ, ನಗರ ಸಭೆಯ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ್ದು ಜಿಎಂ ಸ್ಕೂಲ್ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಸದಸ್ಯ ದಯಾನಂದ್ ಮಾತನಾಡಿ, ಹಿಂದಿನ ದಿನಗಳಲ್ಲಿ ನಗರಸಭೆಯಿಂದ ಪೈಪ್ ಲೈನ್ ಅಳವಡಿಸಲಾಗಿದೆ ಆದರೆ ಈ ಲೈನ್ ಗಳಲ್ಲಿ ನೀರು ಹರಿಯದಿದ್ದರೂ ಹಳೆಯ ಮಾಹಿತಿಯನ್ನೇ ಪಡೆದು ಕರ ವಸೂಲಿ ಮಾಡಲಾಗುತ್ತಿದೆ. ಇದರಿಂದ ಬಹುತೇಕ ಮನೆ ಮಾಲಿಕರಿಗೆ ಇದರಿಂದ ತೊಂದರೆಯಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದರು.
ಸದಸ್ಯ ಯೋಗೇಂದ್ರ ಬಾಬು ಮಾತನಾಡಿ, ನಗರಸಭೆಯ ಯಾವ ಅನುಮತಿ ಪಡೆಯದೇ ಆರ್.ಸಿ. ರಸ್ತೆ, ಜನತಾ ಆಸ್ಪತ್ರೆ ಪಕ್ಕದಲ್ಲಿ ಖಾಸಗೀಯವರು ವಸ್ತು ಪ್ರದರ್ಶನ ನಡೆಸುತ್ತಿದ್ದಾರೆ. ಅನಾಧಿಕೃತ ವಸ್ತು ಪ್ರದರ್ಶನದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಭೆಗೆ ಮೊದಲು ಮಡಿದ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್, ಮಾಜಿ ಸಿಎಂ ಎಸ್.ಎಂ. ಕೃಷ್ಣ, ಮಾಜಿ ಶಾಸಕ ಪಟೇಲ್ ಶಿವರಾಂ, ನಾಗಣ್ಣ, ದೇವರಾಜು ಇವರ ಆತ್ಮಕ್ಕೆ ಶಾಂತಿಕೋರಿ ಎರಡು ನಿಮಿಷ ಮೌನ ಆಚರಿಸಿದರು. ಇದಾದ ನಂತರ ನಾಮನಿರ್ದೇಶಕರಾಗಿ ಆಯ್ಕೆಗೊಂದವರನ್ನು ಸನ್ಮಾನಿಸಿ ಗೌರವಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲತಾದೇವಿ, ಪ್ರಬಾರಿ ಆಯುಕ್ತ ರಮೇಶ್, ಇಂಜಿನಿಯರ್ ಚನ್ನೇಗೌಡ ಹಾಗೂ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.