
ಚಿಕ್ಕಮೇದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಟ್ರುವಳ್ಳಿ ಗ್ರಾಮದ ಖಾತೆ ಸಂಖ್ಯೆ 97/112ರ ನಿವೇಶನದ ಜಾಗವನ್ನು ಮರುಸರ್ವೇ ಮಾಡಿ, ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಹಾಸನ ಜಿಲ್ಲಾಧಿಕಾರಿ ಸಿ ಸತ್ಯಭಾಮ ಬೇಲೂರು ತಹಶೀಲ್ದಾರ್ ಅವರಿಗೆ ಕರೆ ಮಾಡಿ ಆದೇಶ ಮಾಡಿದ್ದಾರೆ.
ಖಾತೆ ನಂಬರ್.97/112ರ ಜಾಗವು ಸರ್ಕಾರಿ ಜಾಗವಾಗಿರುವುದರಿಂದ ಜಾಗವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಖಾತೆಯನ್ನು ತಡೆಹಿಡಿಯಬೇಕಾಗಿ ವಿನಂತಿಸಿ ಕೆಡಿಪಿ ಸದಸ್ಯ ಎಂ ಎಸ್ ನಂದೀಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಇದನ್ನು ಗಮನಿಸಿ ತಹಶೀಲ್ದಾರ್ ಅವರಿಗೆ ಆದೇಶ ನೀಡಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಕ್ಕೂ ಮೊದಲು ಕೆಡಿಪಿ ಸದಸ್ಯ ಎಂ ಎಸ್ ನಂದೀಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಚಿಕ್ಕಮೇದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಟ್ರುವಳ್ಳಿ ಗ್ರಾಮದಲ್ಲಿ ಮರುಸರ್ವೇಗೆ ಅರ್ಜಿ ಸಲ್ಲಿಸಿದ್ದರೂ ಸರ್ವೆ ನಡೆಸದೆ, ಪರಿಶೀಲಿಸಿ ವರದಿ ನೀಡುವುದು ಎಷ್ಟು ಸರಿ?. ಇದರಿಂದ ನಿವೇಶನದಾರರಿಗೆ ಹಾಗೂ ಅಲ್ಲಿರುವ ಮನೆಗಳಿಗೆ ತಿರುಗಾಡಲು ದಾರಿ ಇಲ್ಲದಂತಾಗಿದೆ. ಹಾಗಾಗಿ ಕೂಡಲೇ ಮರುಸರ್ವೇ ನಡೆಸಿ ನ್ಯಾಯ ಒದಗಿಸಬೇಕು” ಎಂದು ಬೇಲೂರು ತಾಲೂಕಿನ ನಿವಾಸಿಗಳು ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
“ಗೊಟ್ರುವಳ್ಳಿ ಗ್ರಾಮದ ಸರ್ವೇ ನಂಬರ್ 30ರಲ್ಲಿ ನಿವೇಶನವಿದೆ. 1.13 ಎಕರೆ ಜಾಗದಲ್ಲಿ 1-04 ಗುಂಟೆ ಜಾಗವು ಅನ್ಯಸಂಕ್ರಮಣಗೊಂಡು ಉಳಿದ 9 ಗುಂಟೆ ವಿಸ್ತೀರ್ಣ ಪ್ರದೇಶವು ಸರ್ಕಾರಿ ನಕ್ಷೆಯಲ್ಲಿ ಇರುವಂತೆ ದಾರಿಯಾಗಿ ಕಂಡುಬಂದಿದ್ದು, ಈ ಸರ್ವೇ ನಂಬರಿನ ಪೂರ್ವ ಭಾಗಕ್ಕೆ ಯಾವುದೇ ಸರ್ವೇ ನಂಬರಿಗೆ ಸೇರದ ಜಾಗವು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ದಿಂಡು ರಸ್ತೆಯಿದೆ” ಎಂದು ಹೇಳಿದರು.
“ಈ ಜಾಗದ ಬಗ್ಗೆ ತಾವು ಹಾಸನ ಜಿಲ್ಲೆ ಪತ್ರ ಸಂಖ್ಯೆ 29/2017-2018, 2017ರ ಆಗಸ್ಟ್ 17ರ ಅರ್ಜಿಯ ನಿಯಮಾನುಸಾರ ಪರಿಶೀಲಿಸಿ ಎನ್ ನಿಡಗೋಡು ಗಡಿ ಭಾಗವಾದ ಗೊಟ್ರುವಳ್ಳಿ ಗ್ರಾಮದ ಸರ್ವೇ ನಂಬರ್ 30ರಲ್ಲಿ ನಕಾಶೆ ಕಂಡ ದಾರಿಯಿದ್ದು, ಅಳತೆ ಕಾರ್ಯ ನಡೆಸಿ ಒತ್ತುವರಿದಾರರು ಸರ್ವೇ ನಂಬರ್ 30ರಲ್ಲಿ ಬಂಡಿದಾರಿ ಹಾದು ಹೋಗಿದೆ. ಪೂರ್ವ ಭಾಗಕ್ಕೊಂದು ದಾರಿಯಿದ್ದು, ಅದಕ್ಕೆ ಯಾವುದೇ ಹಿಡುವಳಿ ಸರ್ವೆ ನಂಬರ್ ಇಲ್ಲ. ಇದು ಸರ್ಕಾರಿ ಜಮೀನಾಗಿದೆ ಎಂದು ವರದಿ ನೀಡಿದ್ದಾರೆ. 2018 ಜನವರಿ 8ರಂದು ಸಂಬಂಧಪಟ್ಟ ಎಲ್ಲ ಅಧಿಕಾರಿ ಸಿಬ್ಬಂದಿ ಹಾಗೂ ಸರ್ವೇಯವರು ಗ್ರಾಮಸ್ಥರ ಸಮಕ್ಷಮದಲ್ಲಿ ಈ ಜಾಗವು ಸರ್ಕಾರಿ ಜಾಗವಾಗಿದೆಯೆಂದು ಮಾಹಿತಿಯನ್ನು ನೀಡಿದ್ದಾರೆ. ಆದ್ದರಿಂದ ಖಾತೆ ನಂಬರ್ 97/112ರ ಖಾತೆಯನ್ನು ತಡೆಹಿಡಿಯಬೇಕಾಗಿ ಕೇಳಿಕೊಳ್ಳುತ್ತೇನೆ” ಎಂದು ಕೋರಿದರು.
“ತಮ್ಮ ಇಲಾಖೆಯಲ್ಲಿ ಮರುಸರ್ವೇಗೆ ಅರ್ಜಿ ಸಲ್ಲಿಸಿದ್ದರೂ ಸರ್ವೇ ನಡೆಸದೆ ಪರಿಶೀಲಿಸಿ ವರದಿ ನೀಡುವುದು ಎಷ್ಟು ಸರಿ?. ಬಂಡಿದಾರಿ ಪಕ್ಕದ ನಿವೇಶನದಾರರಿಗೆ ಹಾಗೂ ಮನೆಗಳಿಗೆ ತಿರುಗಾಡಲು ದಾರಿ ಇಲ್ಲದಂತಾಗಿದೆ. 97/112 ಖಾತೆದಾರರು ಸರ್ವೇ ನಂಬರ್ 30ರಲ್ಲಿ ದಾಖಲಾತಿ ಹೊಂದಿದ್ದು, ಯಾವುದೇ ಸರ್ವೇ ನಂಬರ್ ಹಿಡುವಳಿ ಅಲ್ಲದ ಪಕ್ಕದ ಜಾಗ ನಮ್ಮದೆಂದು ಭಾವಿಸಿದ್ದಾರೆ. ಆದ್ದರಿಂದ ಮರುಸರ್ವೇ ಮಾಡಿಸಿ ನ್ಯಾಯ ಒದಗಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮನವಿಯೊಂದಿಗೆ ನೀಡುತ್ತೇವೆ” ಎಂದರು.