ಹಾಸನ: ತೆಲಂಗಾಣ ರಾಜ್ಯದಲ್ಲಿ 125 ಅಡಿ ಹಾಗೂ ಆಂದ್ರ ಪ್ರದೇಶದಲ್ಲಿ 206 ಅಡಿ ಎತ್ತರದ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರ 250 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಕೆ.ಪಿ.ಎಸ್.ಎಸ್. ಸಂಘಟನೆ ಜಿಲ್ಲಾಧ್ಯಕ್ಷ ಕೆ.ವೈ. ಜಗದೀಶ್ ಮತ್ತು ಕರ್ನಾಟಕ ಭೀಮ್ ಸೇಬೆ ಜಿಲ್ಲಾ ಕಾರ್ಯದರ್ಶಿ ಚಂದ್ರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, 2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಹಾಗೂ 2024ರಲ್ಲಿ ಜರುಗಿದ ಲೋಕಸಭೆ ಚುನಾವಣೆಯಲ್ಲಿ ಎಲ್ಲ ದಲಿತ ಪರ ಸಂಘಟನೆಗಳು ಹಾಗೂ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದೆ.
ಇದರಿಂದ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಗಳಿಸಿದ್ದಾರೆ. ದಲಿತರ ಅಸ್ಮಿತೆಯ ಪ್ರತೀಕವಾಗಿರುವ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಋಣ ತೀರಿಸಬೇಕೆಂದು ಆಗ್ರಹಿಸಿದರು. ಲಾಲ್ ಬಾಗ್ನಲ್ಲಿ ಅಂಬೇಡ್ಕರ್ ಪ್ರತಿಮೆಯೊಂದಿಗೆ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಬೇಕು. ಅಂಬೇಡ್ಕರ್ ಅವರ ವಿಚಾರಗಳ ಪರಿಚಯ, ಸಂವಿಧಾನದ ಮಹತ್ವ ಸಾರುವ ಕೆಲಸ ಮಾಡಬೇಕು.ಬರುವ ಬಜೆಟ್ನಲ್ಲಿ 250 ಅಡಿ ಪ್ರತಿಮೆ ಸ್ಥಾಪನೆಗೆ ಅನುದಾನ ಮೀಸಲಿಡಬೇಕು. 2026ರ ಒಳಗೆ ಅದನ್ನು ಉದ್ಘಾಟಿಸಬೇಕು ಎಂದು ಹೇಳಿದರು.
ಈ ಹಿಂದೆ ಇದ್ದಂತಹ ಸರ್ಕಾರದ ದುರಾಡಳಿತದಿಂದ ಬೇಸತ್ತು, ಎಲ್ಲ ಹಿಂದುಳಿದ ಸಮುದಾಯ ಒಂದಾಗಿ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಮಹತ್ವದ ಪಾತ್ರ ವಹಿಸಿದ್ದೇವೆ, ಆದುದರಿಂದ ಈ ನಮ್ಮ ಮನವಿಯನ್ನು ವಿನಯಪೂರ್ವಕವಾಗಿ ಗೌರವಿಸಿ ರಾಜ್ಯದಲ್ಲಿ 250 ಎತ್ತರದ ಬಿ.ಆರ್.ಅಂಬೇಡ್ಕರವರ ಪ್ರತಿಮೆ ನಿರ್ಮಾಣ ಮಾಡಬೇಕು. 2025-26ನೇ ಸಾಲಿನ ಬಜೆಟ್, ಕರ್ನಾಟಕದ ವಿಧಾನಸಭೆ ಬಜೆಟ್ ಮಂಡನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರವರ 250 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಘೋಷಿಸಬೇಕೆಂದು ಕರ್ನಾಟಕ ರಾಜ್ಯದ ಎಲ್ಲ ಕನ್ನಡಿಗರ ಹಾಗು ಹಿಂದುಳಿದ ಸಮುದಾಯದ ಪರವಾಗಿ ಕರ್ನಾಟಕ ಭೀಮ್ ಸೇನೆ ಸಂಘಟನೆ ವತಿಯಿಂದ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಬೆಂಗಳೂರಿನ ಲಾಲ್ ಬಾಗ್ ನ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 250 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಬೇಕು. ನಮ್ಮ ರಾಜ್ಯದಲ್ಲೂ ಸ್ಥಾಪಿಸಿ ಯುವ ಜನಾಂಗಕ್ಕೆ ಪ್ರೇರಣೆ ಆಗುವಂತಹ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದು ಕೋರಿದರು.
ಇದೆ ಸಂದರ್ಭದಲ್ಲಿ ಪೋಸ್ಟರ್ ಹಾಗೂ ಕರಪತ್ರ ಬಿಡುಗಡೆ ಮಾಡಿ ಡಾ|| ಬಿ.ಆರ್. ಅಂಬೇಡ್ಕರ್ ಅವರ 250 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಕೆ.ಪಿ. ಗಣೇಶ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವಿಠಲ್, ದಲಿತ ಮುಖಂಡ ಗುರುಮೂರ್ತಿ, ಕರ್ನಾಟಕ ಭೀಮ್ ಸೇನೆ ಜಿಲ್ಲಾ ಕಾರ್ಯದರ್ಶಿ ಚಂದ್ರು, ತಾಲೂಕು ಅಧ್ಯಕ್ಷ ದೇವರಾಜು ಇತರರು ಉಪಸ್ಥಿತರಿದ್ದರು