ಹಾಸನ: ಪರಿಶಿಷ್ಠ ಜಾತಿ ಅಲೆಮಾರಿ ಕೊರಮ-ಕೊರಚ (ಕುಳುವ) ಸಮುದಾಯದ ಕುಟುಂಬಗಳ ಮೇಲಿನ ದೌರ್ಜನ್ಯ ಹಾಗೂ ಅಘೋಷಿತ ಸಾಮಾಜಿಕ ಬಹಿಷ್ಕಾರವನ್ನು ಖಂಡಿಸಿ, ಕೂಡಲೇ ಜಿಲ್ಲಾಡಳಿ ತಪಿಸ್ಥರ ವಿರುದ್ದ ತುರ್ತು ಕ್ರಮಕ್ಕೆ ವಕೀಲರು ಹಾಗೂ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಜಂಠಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬೇಲೂರು ತಾಲ್ಲೂಕು ಹಳೇಬೀಡು ಹೋಬಳಿ, ರಾಜನ ಶಿರಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗೌರಿಕೊಪ್ಪಲು ಗ್ರಾಮವನ್ನು ಸರ್ಕಾರ ಕಳೆದ ವರ್ಷ ಮಾರ್ಚ್ ೨೬ ರಂದು ಅಧಿಕೃತವಾಗಿ ನೂತನ ಕಂದಾಯ ಗ್ರಾಮವನ್ನಾಗಿಸಿದೆ. ಈ ಗ್ರಾಮದಲ್ಲಿರುವ ಕುಳುವ ಸಮುದಾಯಕ್ಕೆ ಸೇರಿದ ಶ್ರೀಮತಿ ಸಣ್ಣತಾಯಮ್ಮ, ಮಂಜಪ್ಪ, ತಿಮ್ಮಶೆಟ್ಟಿ, ನರಸಿಂಹಶೆಟ್ಟಿ ಇವರು ಕಳೆದ ೧೯೯೧ ರಲ್ಲಿ ಸರ್ಕಾರ ಹಕ್ಕುಪತ್ರ ನೀಡಿರುವ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಕಳೆದ ೬೦ ವರ್ಷಗಳಿಂದ ವಾಸಿಸುತ್ತಿದ್ದಾರೆ ಎಂದರು. ಆದರೆ ೨೦೨೫ ಜನವರಿ ೩೧ ರಂದು ಗೌರಿಕೊಪ್ಪಲು ಗ್ರಾಮದ ಸವರ್ಣೀಯರಾದ ರಾಮೇಗೌಡ, ವೆಂಕಟೇಶ್, ಲೋಹಿತ್, ಹಾಗೂ ಭರತ್ ೪ ಜನರು ಈ ಕುಟುಂಬಗಳು ಸರ್ಕಾರಿ ಗ್ರಾಮಠಾಣದಲ್ಲಿ ದನದಕೊಟ್ಟಿಗೆ ನಿರ್ಮಿಸಿಕೊಂಡು ಸ್ವಾಧೀನಾನುಭವದಲ್ಲಿದ್ದ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿ, ಯಾವುದೇ ನೋಟಿಸ್ ಹಾಗೂ ಮನ್ಸೂಚನೆ ಇಲ್ಲದೇ ಏಕಾಏಕಿ ಪಿ.ಡಿ.ಒ ಹಾಗೂ ಪೋಲಿಸ್ರರನ್ನು ಕರೆತಂದು ಕೊಟ್ಟಿಗೆಗಳನ್ನು ಕೆಡವಿ, ನಿವೇಶನಕ್ಕೆ ತಂತಿ ಬೇಲಿ ಹಾಕಿ, ರಸ್ತೆಗೆ ಮುಳ್ಳು, ಸೌದೆ, ಹಾಕಿ ಮುಚ್ಚಿಸಿರುತ್ತಾರೆ. ಇದು ಅತ್ಯಂತ ಖಂಡನೀಯ, ಸವರ್ಣೀಯರು ದಲಿತ ಅಲೆಮಾರಿ ಜನರ ಮೇಲೆ ನೆಡೆಸುವ ದೌರ್ಜನ್ಯವಾಗಿದೆ. ಈ ಘಟನೆಯಿಂದಾಗಿ ಕಳೆದ ೧೫ ದಿನಗಳಿಂದ ಈ ೦೬ ಕುಟುಂಬಗಳು ತಿರುಗಾಡಲು ರಸ್ತೆ ಇಲ್ಲದೇ, ದನಕರುಗಳಿಗೆ ಜಾಗವಿಲ್ಲದೇ ಆತಂಕ ಹಾಗೂ ಭಯದಿಂದ ನಡುಗದ್ದೆಯಲ್ಲಿ ಬಂಧಿಯಾಗಿದ್ದಾರೆ. ಈ ಗ್ರಾಮದಲ್ಲಿ ಯಾರೊಬ್ಬರು ಸಹ ಇವರಿಗೆ ಸಹಕರಿಸದೇ ಅಘೋಷಿತವಾಗಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ ಹೆತ್ತೂರ್ ನಾಗರಾಜು, ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಸಂಘಟನ ಕಾರ್ಯದರ್ಶಿ ಎಂ.ಎ. ರಂಗಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಹೆಚ್.ಜೆ. ಪ್ರೇಮಕುಮಾರ್, ಗ್ರಾಮ ಘಟಕ ಕಾರೇಹಳ್ಳಿ ಅಧ್ಯಕ್ಷ ಶಿವಣ್ಣ, ಸರೋಜಮ್ಮ ಗೌರಿಕೊಪ್ಪಲು, ಸಣ್ಣತಾಯಮ್ಮ ಗೌರಿಕೊಪ್ಪಲು, ಮಂಜಪ್ಪ ಇತರರು ಉಪಸ್ಥಿತರಿದ್ದರು