
ಹಾಸನ : ನಗರದ ಸಭೆ ಕುವೆಂಪು ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುವ ವೇಳೆಯೇ ಸಾಮಾಜಿಕ ಹೋರಾಟಗಾರ ಕೃಷ್ಣದಾಸ್ ಅವರು ನಗರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರ ಸಭೆ ಹೊರಾಂಗಣದಲ್ಲಿ ಏಕಾಂಗಿ ತಮಟೆ ಚಳುವಳಿ ನಡೆಸಿ, ನಗರಸಭೆ ಅಧ್ಯಕ್ಷರು ಸ್ಥಳಕ್ಕೆ ಬರುವರೆಗೂ ಹೋರಾಟ ಕೈಬಿಡುವುದಿಲ್ಪ ಎಂದು ಹಠ ಹಿಡಿದಾಗ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಹಾಗೂ ಸದಸ್ಯರು ಆಗಮಿಸಿದ ಪ್ರಸಂಗ ನಡೆಯಿತು.
ಈ ವೇಳೆ ಸುದ್ದಿಗಾರರೊಂದಿಗೆ ದಲಿತ ಹಿರಿಯ ಮುಖಂಡ ಕೃಷ್ಣಾದಾಸ್ ಮಾತನಾಡಿ, ನಗರದ ಹೃದಯ ಭಾಗವಾದ ಎನ್ ಆರ್ ವೃತ್ತ ಈ ವೃತ್ತವನ್ನು ಎಪ್ಪತ್ತು ವರ್ಷಗಳ ಹಿಂದೆ ನಮ್ಮ ನಾಡಿನ ಒಡೆಯರಾದ ಕಂಠೀರವ ನರಸಿಂಹ ರಾಜ ಒಡೆಯರ್ ಅವರು ಸ್ಮರಣಾರ್ಥವಾಗಿ ಅವರ ಹೆಸರನ್ನು ಇಡಲಾಯಿತು. ದೀನ ದಲಿತರ, ಶೋಷಿತರ, ಮಹಿಳೆಯ ಪರವಾಗಿ ಧ್ವನಿಯಾಗಿ, ಸಮಾಜಕ್ಕೆ ಸಾಮಾಜಿಕವಾಗಿ ಅನೇಕ ಕೊಡುಗೆ ನೀಡಿದ ಮಹಾನ್ ವ್ಯಕ್ತಿ ಅವರು, ಈಗಾಗಲೇ ಎನ್ ಆರ್ ವೃತ್ತದಲ್ಲಿ ಡಾ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಹಾಗು ಚಲನಚಿತ್ರ ನಟ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ಪ್ರತಿಮೆ ಇದೆ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಅದರಂತೆ ನಾಡಿಗಾಗಿ ದುಡಿದ ನಾಡ ದೊರೆ ಕಂಠೀರವ ನರಸಿಂಹ ರಾಜ ಒಡೆಯರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಮತ್ತು ಎನ್ ಆರ್ ವೃತ್ತದ ಬದಲು ಅವರ ಪೂರ್ಣ ಹೆಸರಾದ ಕಂಠೀರವ ನರಸಿಂಹ ರಾಜ ಒಡೆಯರ್ ಎಂದು ಬರೆಸಬೇಕು ಎಂದು ಒತ್ತಾಯಿಸಿದರು. ಹಾಸನ ನಗರದ ನಗರ ಸಭಾ ವ್ಯಾಪ್ತಿಯ ಹೊರವಲಯದಲ್ಲಿರುವ ರುದ್ರಭೂಮಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ರುದ್ರಭೂಮಿಗೆ ಕನಿಷ್ಠ ಮೂಲಭೂತ ಸೌಲಭ್ಯ ನೀಡಬೇಕು. ಮತ್ತು ನಗರ ಸಭೆಯಿಂದ ಕಳೆದ ಆರು ವರ್ಷಗಳಿಂದ ಪೌರಕಾರ್ಮಿಕರಿಗಾಗಿ ನಿರ್ಮಾಣವಾಗುತ್ತಿರುವ ಗೃಹ ನಿರ್ಮಾಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಆದಷ್ಟು ಬೇಗ ಗೃಹ ನಿರ್ಮಾಣ ಕಾಮಗಾರಿ ಮುಗಿಸಿ ಮೂಲಭೂತ ಸೌಲಭ್ಯಗಳನ್ನು ನೀಡಿ ಪೌರಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿ ಮನವಿ ನೀಡಿದರು.