
ಮೂವರು ದುಷ್ಕರ್ಮಿಗಳು 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಂಡ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಎರಡು ದಿನಗಳ ನಂತರ ಬೆಳಕಿಗೆ ಬಂದಿದೆ.
ಜನವರಿ 31ರಂದು ಮೂವರು ದುಷ್ಕರ್ಮಿಗಳು ಬಾಲಕಿಗೆ ಕೇಕ್ ಕೊಡಿಸಿ ನಂತರ, ಚಾಕು ತೋರಿಸಿ ಬೆದರಿಸಿ ಶಾಲಾ ಆವರಣದಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹೊಟ್ಟೆ ನೋವು ಮತ್ತು ರಕ್ತಸ್ರಾವದಿಂದ ನರಳುತ್ತಿದ್ದ ಬಾಲಕಿಯನ್ನು ಆಕೆಯ ಚಿಕ್ಕಮ್ಮ ವಿಚಾರಿಸಿದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದಳು ಎನ್ನಲಾಗಿದ್ದು, ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಂಡ್ಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಗಳ ವಿವರ ಪಡೆಯಲು ಯತ್ನಿಸಿದ್ದಾರೆ. ಅವರು ಶಾಲೆಗೆ ಭೇಟಿ ನೀಡಿ ಶಿಕ್ಷಕರು ಮತ್ತು ಸಿಬ್ಬಂದಿಯನ್ನೂ ಕೂಡಾ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿದ್ದೀರಾ? ಪುಣೆ | ಪೆರೋಲ್ ವೇಳೆ ಪರಾರಿಯಾಗಿದ್ದ ಗೋಧ್ರಾ ರೈಲು ಹತ್ಯಾಕಾಂಡದ ಅಪರಾಧಿ ಬಂಧನ
“ಬಾಲಕಿಯ ಹೇಳಿಕೆಗಳು ಸ್ಪಷ್ಟವಾಗಿಲ್ಲದ ಕಾರಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬಾಲಕಿಗೆ ಸಲಹೆ ನೀಡುತ್ತಿದ್ದಾರೆ. ಮೂವರು ಹುಡುಗರು ತನ್ನ ಮೇಲೆ ದಾಳಿ ಮಾಡಿದ್ದಾರೆಂದು ಮಗು ಹೇಳಿದೆ. 2ನೇ ತರಗತಿ ವಿದ್ಯಾರ್ಥಿಯ ಹೆಸರನ್ನೂ ಹೇಳಿದ್ದಾಳೆ. ಆದರೆ ಆ ದಿನ ವಿದ್ಯಾರ್ಥಿಯು ಶಾಲೆಗೆ ಬಾರದಿರುವ ಮಾಹಿತಿ ಇದೆ. ಆಕೆಗೆ ವಿದ್ಯಾರ್ಥಿಗಳಿಂದ ದೌರ್ಜನ್ಯ ನಡೆದಿದೆಯೇ ಅಥವಾ ದೊಡ್ಡವರು ಕ್ರೌರ್ಯ ಎಸಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ, ಆದರೆ ಇನ್ನೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ” ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
“ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ಬಂಧನಕ್ಕೆ ಕ್ರಮವಹಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.