
ಸಾರಿಗೆ ಬಸ್ ಮತ್ತು ಟಿಪ್ಪರ್ ನಡುವೆ ಓವರ್ಟೇಕ್ ಮಾಡುವ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಪ್ರಯಾಣಿಕ ಮಹಿಳೆಯೊಬ್ಬರ ಕುತ್ತಿಗೆ ಮತ್ತು ಕೈ ಕತ್ತರಿಸಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಬಳಿ ಶನಿವಾರ ಸಂಭವಿಸಿದೆ.
ಬೇಗೂರು ಸಮೀಪದ ಆಲಹಳ್ಳಿ ಗ್ರಾಮದ ಶಿವಲಿಂಗಮ್ಮ (43) ಮೃತ ಮಹಿಳೆ ಎಂದು ತಿಳಿದುಬಂದಿದೆ. ಆಕೆ ನಂಜನಗೂಡು ಮಾರ್ಗವಾಗಿ ಮೈಸೂರಿನಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಸಿಂಧುವಳ್ಳಿ ಗ್ರಾಮದ ಬಳಿ ಮಹಿಳೆಯು ಬಸ್ನ ಕಿಟಕಿಯಿಂದ ಕತ್ತನ್ನು ಹೊರಹಾಕಿದ್ದು, ಅದೇ ಸಮಯದಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಮತ್ತು ಸಾರಿಗೆ ಬಸ್ ನಡುವೆ ಕ್ಷಣಾರ್ಧದಲ್ಲಿ ಅಪಘಾತವಾಗಿದೆ. ಪರಿಣಾಮ ಶಿವಲಿಂಗಮ್ಮ ಕುತ್ತಿಗೆ ಮತ್ತು ಕೈ ತುಂಡಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ವಾಹನ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿದ್ದೀರಾ? ಬಳ್ಳಾರಿ | ಜಿಲ್ಲಾಸ್ಪತ್ರೆ ವೈದ್ಯ ಅಪಹರಣ; ₹6 ಕೋಟಿ, ಚಿನ್ನಕ್ಕೆ ಬೇಡಿಕೆ
ನಂಜನಗೂಡು ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಸಿದ್ದರಾಜು ಮತ್ತು ಸಿಬ್ಬಂದಿ ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಾರಿಗೆ ಬಸ್ ವಶಕ್ಕೆ ಪಡೆದುಕೊಂಡಿದ್ದಾರೆ. ನಾಪತ್ತೆಯಾಗಿರುವ ಟಿಪ್ಪರ್ ವಾಹನವನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.