ಹಾಸನ: ಕೇವಲ ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಮಾತ್ರ ಗ್ಯಾರಂಟಿ ಹಣವನ್ನು ಕೊಡುವ ಕಾಂಗ್ರೆಸ್ ಸರಕಾರಕ್ಕೆ ಉಳಿದ ಸಮಯದಲ್ಲಿ ನೆನಪು ಬರುವುದಿಲ್ಲ ಎಂದು ಜೆಡಿಎಸ್ ಪಕ್ಷದ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ನಗರದ ಸಮೀಪ ಖಾಸಗೀ ರೆಸಾರ್ಟ್ವೊಂದರಲ್ಲಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷರು, ಹಾಲಿ ,ಮಾಜಿ ಶಾಸಕರು ಕಳೆದ ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿಗಳ ಸಭೆಯನ್ನು ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ ಸಮಯದಲ್ಲಿ ಗೃಹಲಕ್ಷ್ಮಿ ಹಣ ಕೊಡಲಾಗಿತ್ತು. ಆದರೇ ಮನೆಯಲ್ಲಿ ಗೃಹಣಿಯರು ಗೃಹಲಕ್ಷ್ಮಿ ಹಣ ಬರುತ್ತದೆ ಎಂದು ಕಾದಿದ್ದಾರೆ. ಮುಂದೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಘೋಷಣೆ ಆದರೇ ಮಾತ್ರ ಗೃಹ ಲಕ್ಷ್ಮಿಯ ಹಣ ಹಾಕುತ್ತಾರೆ. ಇವರಿಗೆ ಚುನಾವಣೆ ವೇಳೆ ಮಾತ್ರ ಗ್ಯಾರಂಟಿ ನೆನಪಿಗೆ ಬರುತ್ತದೆ ಎಂದು ವ್ಯಂಗ್ಯವಾಡಿದರು. ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಕುರಿತು ನಾವು ಸಭೆ ಮಾಡಿದ್ದೇವೆ. ಈಗಾಗಲೇ ಪಕ್ಷದ ಸದಸ್ಯತ್ವ ನೋಂದಣಿ ವೇಗವಾಗಿ ನಡೆಯುತ್ತಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಸಾಕಷ್ಟು ಚರ್ಚೆ ಮಾಡಿದ್ದೇವೆ. ಈ ಸ್ಥಳೀಯ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹತ್ತು ದಿನದಲ್ಲೇ ಕುಮಾರಣ್ಣ ಜೆಡಿಎಸ್ ಶಾಸಕರು, ಎಂಎಲ್ಸಿ, ಮುಖಂಡರ ಸಭೆ ಮಾಡಲಿದ್ದಾರೆ ಎಂದರು. ಇನ್ನು ಲೋಕಸಭಾ ಅಧಿವೇಶನ ನಡೆಯುವಾಗ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕರೆ ನೀಡಿರುವ ಬಗ್ಗೆ ಇದೆ ವೇಳೆ ನೆನಪಿಸಿದರು.
ಬಿಜೆಪಿ – ಜೆಡಿಎಸ್ ಮೈತ್ರಿ ಬಹಳ ಭದ್ರವಾಗಿದೆ, ಕೇಂದ್ರ ನಾಯಕರು ದೇವೇಗೌಡರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಂತರ ಕೇಂದ್ರ ಸಚಿವರಾಗಿ ಎರಡು ಖಾತೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೊಟ್ಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೆಲಸ ಮಾಡಿದಂತೆ ಮುಂದೆ ನಡೆಯುವ ಎಲ್ಲಾ ಚುನಾವಣೆಯಲ್ಲೂ ಕೂಡ ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಿನಿಂದ ಎದುರಿಸುವುದಾಗಿ ವಿಶ್ವಾಸವ್ಯಕ್ತಪಡಿಸಿದರು.
ಇದೆ ವೇಳೆ ವಿಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕಿ ಶಾರದಾ ಪೂರ್ವ ನಾಯಕ್, ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ, ಶಾಸಕ ಎ. ಮಂಜು, ಸಿ.ಎನ್. ಬಾಲಕೃಷ್ಣ, ಹೆಚ್.ಪಿ. ಸ್ವರೂಪ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಮುಖಂಡರುಗಳಾದ ಶೃಗೇಂರಿ ಸುಧಾಕರ್ ಶೆಟ್ರು, ಶಿವಮೊಗ್ಗ ಮಾಜಿ ಶಾಸಕರಾದ ಪ್ರಸನ್ನ , ಭದ್ರಾವತಿ ಶಾರದ ಅಪ್ಪಾಜಿಗೌಡ , ಅರಸೀಕೆರೆ ಸಂತೋಷ್ , ಬಾಣಾವರ ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.