
ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ಅವರು ಎಲ್ಲ ಚುನಾವಣೆಗೂ ಬೇಕು. ದಿನಬೆಳಗಾದರೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ನಮ್ಮ ನಾಯಕ, ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ವಿಧಾನಸಭೆ, ಸಂಸತ್ ಚುನಾವಣೆ ಎಲ್ಲದಕ್ಕೂ ಬೇಕು. ಅವರನ್ನು ಕಾಂಗ್ರೆಸ್ ಪಕ್ಷ ಎರಡು ಬಾರಿ ಸಿಎಂ ಮಾಡಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರು ಮಾಧ್ಯಮಗಳಿಗೆ ಆಹಾರವಾಗುವಂತೆ ಗೊಂದಲದ ಹೇಳಿಕೆ ಬೇಡ” ಎಂದರು.
ನೀರಾವರಿ ವಿಚಾರವಾಗಿ ಪಕ್ಷಾತೀತ ಹೋರಾಟ ಮಾಡಬೇಕು ಎಂಬ ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದು, “ರಾಜ್ಯದ ನೆಲ, ಜಲ ಹಿತ ಕಾಪಾಡುವುದಕ್ಕಾಗಿ ನಾವು ಬದ್ಧವಾಗಿದ್ದೇವೆ. ಅವರು ಮೇಕೆದಾಟಿಗೆ ಒಂದೇ ದಿನದಲ್ಲಿ ಸಹಿ ಹಾಕಿಸುವುದಾಗಿ ಹೇಳಿದ್ದರು. ಮಹದಾಯಿ ವಿಚಾರವಾಗಿ ನಾನೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಇದು ಅವರ ಹೋರಾಟವಲ್ಲ. ರಾಜ್ಯದ ಹೋರಾಟ. ಅವರು ಅಧಿಕಾರದಲ್ಲಿರುವಾಗ ಹೋರಾಟ ಯಾಕೆ ಮಾಡಬೇಕು” ಎಂದು ಪ್ರಶ್ನಿಸಿದರು.
“ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ. ಅವರಿಗೆ ರಾಜಕಾರಣ ಮಾಡಿ ರೂಢಿ ಇರಬಹುದು. ನಾವು ಹೋರಾಟ ಮಾಡಿದಾಗ ಅವರು ಯಾವ ರೀತಿ ಟೀಕೆ ಮಾಡಿದ್ದಾರೆಂದು ನೋಡಿದ್ದೇವೆ. ನಾವು ಅದನ್ನು ಮರೆತು ರಾಜ್ಯದ ಹಿತಕ್ಕಾಗಿ ನೀರಾವರಿ ಯೋಜನೆಗೆ ಪ್ರಯತ್ನಿಸುತ್ತೇವೆ. ʼಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿದ್ದೀರಿ, ಅದನ್ನು ಕೊಟ್ಟಿಲ್ಲʼ ಅಂತ ಅವರು ಸಂಸತ್ತಿನಲ್ಲಿ ಯಾವತ್ತಾದರೂ ಪ್ರಶ್ನೆ ಮಾಡಿದ್ದಾರಾ? ದೇವೇಗೌಡರು, ಕುಮಾರಸ್ವಾಮಿ, ಕೇಂದ್ರ ಸಚಿವರು, ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆ ಕೆಲಸದಲ್ಲೂ ವಿಫಲರಾಗಿದ್ದಾರೆ. ಮೊದಲು ಈ ಕೆಲಸ ಮಾಡಲಿ. ಕಾವೇರಿ ಗೋದಾವರಿ ಜೋಡಣೆ ಮಾಡಿದರೆ ಸಂತೋಷ. ಅವರು ಯೋಜನೆ ತರಲಿ. ನಮ್ಮಿಂದ ಯಾವ ಸಹಕಾರ ಬೇಕು ಹೇಳಲಿ, ನಾವು ನೀಡುತ್ತೇವೆ. ಇಲ್ಲಿಂದಲೇ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇವೆ” ಎಂದರು.