ಹಾಸನ: ಯುವ ಜನಾಂಗವನ್ನು ಮದ್ಯ ಮತ್ತು ಧರ್ಮದ ಅಮಲು ತಪ್ಪು ದಿಕ್ಕಿನತ್ತ ಕರೆದೊಯ್ಯುತ್ತಿದ್ದು, ಅದರಿಂದಾಗುವ ಅನಾಹುತಗಳ ಕುರಿತು ಪೋಷಕರು ಜಾಗೃತಿ ಮೂಡಿಸಬೇಕು ಎಂದು ಮಂಗಳೂರಿನ ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮದ್ ಕುಂಞ ಅವರು ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಗುರುವಾರ ಹಮಿಕೊಂಡಿದ್ದ ಕನ್ನಡದಲ್ಲಿ ಸಾರ್ವಜನಿಕ ಕುರ್ಆನ್ ಪ್ರವಚನ ಕಾರ್ಯಕ್ರಮದಲ್ಲಿ ಅಮಲು ಮುಕ್ತ ಸಮಾಜ ಮತ್ತು ಯುವಕರು ವಿಚಾರವಾಗಿ ಉಪನ್ಯಾಸ ನೀಡಿದರು. ರಾಜಕಾರಣಿಗಳು ಚುನಾವಣೆ ಗೆಲ್ಲಲು ಈ ಎರಡೂ ಅಸ್ತçಗಳನ್ನು ಪ್ರಬಲವಾಗಿ ಬಳಸುತ್ತಾರೆ. ಅದರಿಂದ ಉಂಟಾಗುವ ಅನಾಹುತಗಳು ಏನೆಂಬುದು ನಮಗೆಲ್ಲರಿಗೂ ಗೊತ್ತಿದೆ. ಸಮಾಜ ದಾರಿ ತಪ್ಪುವಾಗ ಸರಿ ದಾರಿಗೆ ಕರೆದುಕೊಂಡು ಬರುವ ಕೆಲಸ ರಾಜಕಾರಣಿಗಳಿಂದ ಆಗಬೇಕು. ಆದರೆ ಸದ್ಯದ ಪರಿಸ್ಥಿತಿ ಆ ರೀತಿ ಇಲ್ಲ. ಧರ್ಮಾಂಧತೆ, ಕೋಮುವಾದ, ಸೋಷಿಯಲ್ ಮೀಡಿಯಾ ಅಮಲಿನಿಂದ ಯುವಕರು ಹಾಳಾಗುತ್ತಿದ್ದಾರೆ.
ನಕಾರಾತಕ ಚಟುವಟಿಕೆಗಳಿಂದ ದೂರವಿರಬೇಕೆಂದರೆ ಬಾಲ್ಯದಲ್ಲೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ನಮಲ್ಲಿ ದೇವ ಭಯ ಹುಟ್ಟಿದರೆ ತಪ್ಪುಗಳು ಆಗುವುದಿಲ್ಲ. ಪ್ರವಾದಿ ಮಹಮದ್ ಅವರು ಸಹ ಅದನ್ನೇ ಪ್ರತಿಪಾದಿಸಿದ್ದಾರೆ ಎಂದರು. ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವವರ ವಯಸ್ಸು 28 ಆಗಿತ್ತು. ಈಗ ಅದು 12 ವಯಸ್ಸಿಗೆ ತಲುಪಿದ್ದು ಶಾಲಾ ಮಕ್ಕಳು ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ ಎಂಬುದಕ್ಕೆ ಈ ವರದಿಯೇ ಸಾಕ್ಷಿ. ಅಮಲು ಪದಾರ್ಥಗಳ ಸರಬರಾಜು ಮಾಡುವವರು ಸಹ ಮಕ್ಕಳನ್ನೇ ಗುರಿಯಾಗಿಸಿಕೊಂಡಿದ್ದಾರೆ.
10 ವರ್ಷದಲ್ಲಿ ಭಾರತದಲ್ಲಿ 24 ಲಕ್ಷ ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಅದು ಸರಬರಾಜು ಆಗುತ್ತಿರುವ ಒಟ್ಟು ಅಮಲು ಪದಾರ್ಥಗಳ ಪೈಕಿ ಶೇ. 1 ರಷ್ಟು ಮಾತ್ರ ಎಂಬುದು ದಿಗಿಲು ಹುಟ್ಟಿಸಿದೆ. ಮಾದಕ ವಿಷ ವರ್ತುಲದಿಂದ ಮಕ್ಕಳನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ ಮೇಲಿದೆ. ಆರಂಭದಲ್ಲಿ ಸ್ನೇಹಿತರ ಜೊತೆಗೆ ತಮಾಷೆಗಾಗಿ ಮಾದಕ ಪದಾರ್ಥ ಸೇವಿಸುವ ಮಕ್ಕಳು ನಂತರ ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತಾರೆ. ಅದರಿಂದ ಆರ್ಥಿಕವಾಗಿ ಹಾಳಾಗುವುದಲ್ಲದೆ ಸಮಾಜಕ್ಕೆ ಹೊರೆಯಾಗಿ ಬೆಳೆಯುತ್ತಾರೆ ಎಂದು ಹೇಳಿದರು.
ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ವಾಹನ ಅಪಘಾತ ಪ್ರಕರಣ ಹೆಚ್ಚಲು ಮದ್ಯ ಸೇವನೆಯೇ ಕಾರಣವಾಗಿದೆ. ಮದ್ಯಪಾನ ಮಾಡುವ ಪುರುಷರ ಪತ್ನಿಯರ ಪೈಕಿ ಶೇ. 90 ರಷ್ಟು ಮಹಿಳೆಯರು ಆತಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಿದ್ದಾರೆ. ಆದರೆ ಮಕ್ಕಳಿಗಾಗಿ ಅವರು ಎಲ್ಲಾ ಕಷ್ಟಗಳನ್ನು ಸಹಿಸಿ ಬದುಕುತ್ತಾರೆಂದು ವರದಿಯೊಂದು ಹೇಳಿದೆ. ಈ ಎಲ್ಲಾ ಸಮಸ್ಯೆಗಳನ್ನು ಸಮಾಜ ಗಂಭೀರವಾಗಿ ಪರಿಗಣಿಸಿ ಸರಿ ದಿಕ್ಕಿನಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
ಆನವರಿ 1 ರಂದು ಹೊಸ ವರ್ಷ ಸಂಭ್ರಮಾಚರಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ 800 ಕೋಟಿ ರೂ. ಮದ್ಯ ಮಾರಾಟ ಆಗಿದೆ ಎಂದು ಸರ್ಕಾರವೇ ಹೇಳಿದೆ. ಕಂಠಪೂರ್ತಿ ಕುಡಿಯುವುದೇ ಹೊಸ ವರ್ಷದ ಸಂಭ್ರಮಾಚರಣೆ ಎಂದಾಗಿದೆ. ಒಂದು ವರ್ಷ ಮುಗಿದು ಹೋಗುವಾಗ ಅದರ ಬಗ್ಗೆ ಆತಾವಲೋಕನ ಮಾಡಿಕೊಳ್ಳಬೇಕು. ಮರಣಕ್ಕೆ ಒಂದು ವರ್ಷ ಹತ್ತಿರವಾಗಿದ್ದೇವೆಂದು ಯೋಚಿಸಬೇಕು. ಹೊಸ ವರ್ಷದ ಯೋಜನೆ ಅಥವಾ ಕನಸು ಸಾಕಾರಗೊಳಿಸಲು ಸಿದ್ಧತೆಗೆ ಸಮಯ ಮೀಸಲಿಡಬೇಕು. ಯುವ ಸಮುದಾಯ ಆ ದಿನವನ್ನು ಮತ್ತಷ್ಟು ಕೆಟ್ಟವರಾಗುತ್ತೇವೆಂಬ ಪ್ರತಿಜ್ಞೆಯೊಂದಿಗೆ ಸ್ವಾಗತಿಸುತ್ತದೆ ಎಂದರು. ಪ್ರವಾದಿ ಮಹಮದ್ ಅವರು ಸಹ ದುಶ್ಚಟಗಳಿಂದ ದೂರವಿರುವಂತೆ ಹೇಳಿದ್ದಾರೆ. ಮನುಷ್ಯ ಮಾಡುವ ಘೋರ ಅಪರಾಧಗಳಲ್ಲಿ ಅಮಲು ಪದಾರ್ಥ ಸೇವೆನೆಯೇ ಪ್ರಮುಖವಾದುದು ಎಂದು ಪ್ರತಿಪಾದಿಸಿದ್ದಾರೆ. ಆದ್ದರಿಂದ ನಾವೆಲ್ಲರೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೆ ವೇಳೆ ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಸಂಸದ ಶ್ರೇಯಸ್ ಎಂ. ಪಟೇಲ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಸಾಹಿತಿ ಬಾನು ಮುಷ್ತಾಕ್, ನಿರುಪಮಾ ಕಿರಣ್, ಡಾ. ಎ. ಸಾವಿತ್ರಿ ಇತರರು ಉಪಸ್ಥಿತರಿದ್ದರು.